ಮುಂಬೈ: ಡಿವೋರ್ಸ್ ವದಂತಿ ಬೆನ್ನಲ್ಲೇ ಬಾಲಿವುಡ್‌ನ ಹಿರಿಯ ನಟ ಗೋವಿಂದ ದಂಪತಿಯು ಇಂದು ಗಣೇಶ್ ಹಬ್ಬದ ಸಂಭ್ರಮದಲ್ಲಿ ಮಿಂದೆದ್ದಿದ್ದಾರೆ.
ಕೆಲ ತಿಂಗಳ ಹಿಂದಷ್ಟೇ ಗೋವಿಂದ ವಿವಾಹ ವಿಚ್ಛೇದನ ವಿಚಾರ ಮುನ್ನೆಲೆಗೆ ಬಂದಿತ್ತು. ಇದರ ನಡುವೆಯೇ ಗಣೇಶ ಹಬ್ಬದಂದು ಗೋವಿಂದ ದಂಪತಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ದಂಪತಿ ಒಟ್ಟಿಗೆ ನಿಂತು ಎಲ್ಲರಿಗೂ ಸಿಹಿ ಹಂಚಿದ್ದಾರೆ. ಗೋವಿಂದ ಹಾಗೂ ಸುನೀತಾ ಅಹುಜಾ ಜೋಡಿ ಬಹಳ ಅನ್ಯೋನ್ಯವಾಗಿರುವಂತೆ ಕಂಡುಬಂದ್ರು. ವಿಶೇಷ ಅಂದ್ರೆ ಕಪಲ್ ಟ್ವಿನ್ಸ್ ಕಲರ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಗೋವಿಂದ ಹಾಗೂ ಪತ್ನಿ ಸುನೀತಾ ಅಹುಜಾ ಅವರ ವಿಚ್ಛೇದನ ವಿಚಾರ ಚರ್ಚೆಯಲ್ಲಿತ್ತು. ಗೋವಿಂದ ಅವರ ಪತ್ನಿ ಬಾಂದ್ರಾ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಪ್ರೀತಿ ಮತ್ತು ವಿವಾಹದಲ್ಲಿ ಮೋಸ ಹಾಗೂ ಪ್ರತ್ಯೇಕವಾಗಿ ವಾಸಿಸುತ್ತಿದ್ದೇವೆ ಅಂತ ಕಾರಣ ಕೊಟ್ಟು ಸುನೀತಾ ಅವರು ವಿಚ್ಛೇದನ ಕೋರಿದ್ದರು. ಹಿಂದೂ ವಿವಾಹ ಕಾಯ್ದೆ 1955ರ ಸೆಕ್ಷನ್ 13 (1), (i), (ia), (ib) ಅಡಿಯಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಕೆ ಮಾಡಿದ್ದರು ಎಂದು ಸುದ್ದಿಯಾಗಿತ್ತು.
ಈಗ ರಾಜಕಾರಣಿಯೂ ಆಗಿರುವ ಗೋವಿಂದ ಅವರ ಮುಂಬೈನ ತಮ್ಮ ನಿವಾಸದಲ್ಲಿ ಖುಷಿ ಖುಷಿಯಿಂದ ಗಣಪತಿ ಹಬ್ಬ ಆಚರಿಸಿದ್ದಾರೆ. ಮನೆಯ ಹೊರಗೆ ಪತ್ನಿ ಜೊತೆಗೆ ನಿಂತು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಎಲ್ಲರಿಗೂ ಗಣೇಶ ಚತುರ್ಥಿಯ ಶುಭಾಶಯ ಕೋರಿದ್ದಾರೆ.