ಬಳ್ಳಾರಿ: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಬಂಧಿತರಾಗಿರುವ ನಟ ದರ್ಶನ್ ಗೆ ಬಳ್ಳಾರಿ ಜೈಲಿನಲ್ಲಿ ತೀವ್ರ ಬೆನ್ನು ನೋವಿನ ಸಮಸ್ಯೆ ಕಾಡುತ್ತಿದೆ. ಹಾಗಿದ್ದರೂ ಅವರು ಅಲ್ಲಿ ಚಿಕಿತ್ಸೆ ನಿರಾಕರಿಸುತ್ತಿದ್ದಾರೆ.
ನಟ ದರ್ಶನ್ ರನ್ನು ಇದು ಎರಡನೇ ಬಾರಿಗೆ ವೈದ್ಯರು ಬಳ್ಳಾರಿ ಜೈಲಿನಲ್ಲಿ ತಪಾಸಣೆ ನಡೆಸಿದರು. ದರ್ಶನ್ ತಪಾಸಣೆ ನಡೆಸಿದ ವೈದ್ಯರು ಸ್ಕ್ಯಾನಿಂಗ್ ನಡೆಸಲು ಸೂಚಿಸಿದ್ದರು. ಅಲ್ಲದೆ, ಬೆನ್ನಿನಲ್ಲಿ ಊತವಾಗಿದೆ ಎಂದಿದ್ದರು. ಆದರೆ ಸ್ಕ್ಯಾನಿಂಗ್ ನಡೆಸಲು ದರ್ಶನ್ ಒಪ್ಪಿಲ್ಲ. ಜೊತೆಗೆ ಬಳ್ಳಾರಿಯಲ್ಲಿ ಚಿಕಿತ್ಸೆಗೂ ಒಪ್ಪಿಲ್ಲ.
ನಾನು ಬೆಂಗಳೂರಿಗೆ ಹೋದ ಮೇಲೆ ಅಲ್ಲಿಯೇ ತಪಾಸಣೆ ನಡೆಸಿ ಶಸ್ತ್ರಿಚಿಕಿತ್ಸೆ ನಡೆಸಿಕೊಳ್ಳುವುದಾಗಿ ದರ್ಶನ್ ಹೇಳುತ್ತಿದ್ದಾರೆ. ಏನೇ ಆದರೂ ದರ್ಶನ್ ಬಳ್ಳಾರಿಯಲ್ಲಿ ಚಿಕಿತ್ಸೆಗೆ ಒಪ್ಪದೇ ಇರುವುದಕ್ಕೆ ಕಾರಣವೂ ಇದೆ ಎನ್ನಲಾಗುತ್ತಿದೆ. ದರ್ಶನ್ ಸದ್ಯಕ್ಕೆ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಒಂದು ವೇಳೆ ಬಿಡುಗಡೆಯಾದರೆ ತಮ್ಮ ವೈದ್ಯರ ಬಳಿಯೇ ಚಿಕಿತ್ಸೆ ಪಡೆಯುವ ಉದ್ದೇಶ ಅವರದ್ದಾಗಿದೆ.
ಇನ್ನೊಂದು ಇದೇ ಬೆನ್ನು ನೋವಿನ ವಿಚಾರವೇ ಅವರಿಗೆ ಜಾಮೀನು ಪಡೆಯಲೂ ಸುಲಭವಾಗಬಹುದು. ಒಂದು ವೇಳೆ ಜಾಮೀನು ಈಗಲೇ ಸಿಗದೇ ಇದ್ದರೂ ಚಿಕಿತ್ಸೆಯ ನೆಪದಲ್ಲಾದರೂ ಅವರನ್ನು ಬೆಂಗಳೂರಿನ ಜೈಲಿಗೆ ಶಿಫ್ಟ್ ಮಾಡಬಹುದು ಎಂಬ ಲೆಕ್ಕಾಚಾರಗಳಿವೆ ಎನ್ನಲಾಗುತ್ತಿದೆ.