Publish Date: Sat, 20 Jul 2024 (10:23 IST)
Updated Date: Sat, 20 Jul 2024 (10:25 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ಪರಪ್ಪನ ಅಗ್ರಹಾರದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಗೆ ಚಳಿ ಜ್ವರ ಶುರುವಾಗಿದೆ. ಆದರೂ ಅವರು ತಲೆಯೇ ಕೆಡಿಸಿಕೊಳ್ಳದೇ ಧೈರ್ಯವಾಗಿದ್ದಾರೆ ಎನ್ನಲಾಗಿದೆ.
ಕಳೆದ ಎರಡು ದಿನಗಳಿಂದ ದರ್ಶನ್ ಗೆ ಜ್ವರ ಕಾಡುತ್ತಿದೆ. ಬದಲಾದ ಹವಾಮಾನ ಮತ್ತು ಆಹಾರ ಶೈಲಿಯಿಂದಾಗಿ ದರ್ಶನ್ ಗೆ ವೈರಲ್ ಜ್ವರವಾಗಿದೆ. ಸದ್ಯಕ್ಕೆ ಅವರು ಜೈಲಿನ ವೈದ್ಯಾಧಿಕಾರಿಗಳಿಂದಲೇ ತಪಾಸಣೆಗೊಳಗಾಗಿ ಚಿಕಿತ್ಸೆ ಪಡೆದಿದ್ದಾರೆ. ಸದ್ಯಕ್ಕೆ ಅವರ ಜ್ವರ ಕಡಿಮೆಯಾಗಿದ್ದು ಸುಧಾರಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿಯಿದೆ.
ನಿನ್ನೆ ಜೈಲಿಗೆ ಭೇಟಿ ನೀಡಿದ್ದ ನಿರ್ದೇಶಕ ತರುಣ್ ಸುಧೀರ್ ಕೂಡಾ ಜ್ವರ ಕಡಿಮೆಯಾಗಿದ್ದು ಆರಾಮವಾಗುತ್ತಿದ್ದಾರೆ ಎಂದಿದ್ದರು. ಇನ್ನು ಜೈಲಿನ ಊಟ ಸರಿಯಿಲ್ಲ ಎಂದು ಮನೆ ಊಟಕ್ಕೆ ಅರ್ಜಿ ಸಲ್ಲಿಸಿದ್ದ ದರ್ಶನ್ ಗೆ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಅರ್ಜಿ ಸಲ್ಲಿಸಲು ಹೈಕೋರ್ಟ್ ಆದೇಶಿಸಿತ್ತು.
ಅದರಂತೆ ಈಗ ಮನೆ ಊಟಕ್ಕಾಗಿ ಅವರು ಮ್ಯಾಜಿಸ್ಟ್ರೇಟ್ ಕೋರ್ಟ್ ಮೊರೆ ಹೋಗಬೇಕಾಗಿದೆ. ಇದೇ ವಾರದೊಳಗೆ ಈ ಮನವಿಯ ತೀರ್ಪು ಬರುವ ನಿರೀಕ್ಷೆಯಿದೆ. ಆಗಸ್ಟ್ 1 ರವರೆಗೆ ದರ್ಶನ್ ಮತ್ತು ಗ್ಯಾಂಗ್ ನ್ಯಾಯಾಂಗ ಬಂಧನ ವಿಸ್ತರಿಸಲಾಗಿದೆ. ಅದಾದ ಬಳಿಕ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ.