ಬೆಂಗಳೂರು: ಅಭಿನಯ ಚಕ್ರವರ್ತಿ, ಬಿಗ್ ಬಾಸ್ ಕನ್ನಡ ನಿರೂಪಕ ನಟ ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ಅವರು ಇಂದು ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ವಿಧಿವಶರಾಗಿದ್ದಾರೆ.
ಸರೋಜಾ ಅವರು ದೀರ್ಘ ಕಾಲದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಈ ಅನಾರೋಗ್ಯ ಕಾರಣದಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸುದ್ದಿ ಕಿಚ್ಚು ಸುದೀಪ್ ಮತ್ತು ಅವರ ಆಪ್ತರಿಗೆ, ಅಭಿಮಾನಿಗಳಿಗೆ ಆಘಾತ ನೀಡಿದೆ.
ಮೃತರ ಪಾರ್ಥೀವ ಶರೀರವನ್ನು ಇಂದು ಮಧ್ಯಾಹ್ನ 12 ಗಂಟೆಗೆ ಜೆ.ಪಿ. ನಗರದ ಸುದೀಪ್ ಅವರ ಮನೆಗೆ ತರಲಾಗುತ್ತದೆ. ಅಲ್ಲಿಯೇ ಸಿನಿ ಕಲಾವಿದರಿಗೆ, ರಾಜಕೀಯ ಗಣ್ಯರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಸರೋಜಾ ಅವರು ನಟ ಸುದೀಪ್ ಸೇರಿದಂತೆ ಮೂವರು ಮಕ್ಕಳನ್ನು ಅಗಲಿದ್ದಾರೆ. ಇಂದು ಸಂಜೆಯೇ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ಮಾಹಿತಿ ನೀಡಿವೆ.