19 ಏಜ್ ಈಸ್ ನಾನ್ಸೆನ್ಸ್: ಹರೆಯದ ಹುರುಪಿಗೆ ಸಾಹಸ ಸ್ಪರ್ಶ!

ಸೋಮವಾರ, 2 ಡಿಸೆಂಬರ್ 2019 (17:14 IST)
ರಾಜೇಶ್ವರಿ ಫಿಲಂಸ್ ಬ್ಯಾನರಿನಡಿಯಲ್ಲಿ ಎಸ್. ಲೋಕೇಶ್ ನಿರ್ಮಾಣ ಮಾಡಿರುವ 19 ಏಜ್ ಈಸ್ ನಾನ್ಸೆನ್ಸ್ ಚಿತ್ರ ಡಿಸೆಂಬರ್ 6ರಂದು ಬಿಡುಗಡೆಗೊಳ್ಳಲಿದೆ. ಈ ಶೀರ್ಷಿಕೆಯ ಆಧಾರದಲ್ಲಿಯೇ ಇದರ ಕಥೆಯ ಚಹರೆಯ ಬಗ್ಗೆ ನಾನಾ ದಿಕ್ಕಿನ ಚರ್ಚೆಗಳು ನಡೆದಿದ್ದವು. ಹತ್ತೊಂಭತ್ತರ ಹರೆಯದ ಕಥೆ ಎಂದಾದ ಮೇಲೆ ಇಲ್ಲಿ ಪ್ರೀತಿಯೇ ಪ್ರಧಾನ, ಅದರ ಸುತ್ತಲೇ ಕಥೆ ಸುತ್ತುತ್ತದೆ ಎಂದೂ ಅನೇಕರು ಅಂದುಕೊಂಡಿದ್ದರೆ ಅಚ್ಚರಿಯೇನಿಲ್ಲ. ಆದರೆ ಇತ್ತೀಚೆಗೆ ಬಿಡುಗಡೆಯಾಗಿದ್ದ ಟ್ರೇಲರ್ನಲ್ಲಿ ಎಲ್ಲ ಕಲ್ಪನೆ, ಅನಿಸಿಕೆಗಳನ್ನು ಮೀರಿಕೊಂಡ ಕಥಾ ಹಂದರದ ಸ್ಪಷ್ಟ ರೂಪುರೇಷೆಗಳು ಸಿಕ್ಕಿವೆ.
ಈ ಚಿತ್ರವನ್ನು ಸುರೇಶ್ ಎಂ ಗಿಣಿ ನಿರ್ದೇಶನ ಮಾಡಿದ್ದಾರೆ. ಕನ್ನಡದ ಮಟ್ಟಿದೆ ಹೊಸಾ ಬಗೆಯ ಕಥೆಯೊಂದಿಗೆ 19 ಏಜ್ ಈಸ್ ನಾನ್ಸೆನ್ಸ್ ಅನ್ನು ನಿರ್ದೇಶನ ಮಾಡಿರುವ ಅವರು ಪ್ರತಿಯೊಂದು ವಿಚಾರದಲ್ಲಿಯೂ ಈ ಸಿನಿಮಾವನ್ನು ಅಚ್ಚುಕಟ್ಟಾಗಿ ರೂಪಿಸಿದ್ದಾರಂತೆ. ಅದೆಲ್ಲವೂ ಟ್ರೇಲರ್ ಮೂಲಕವೇ ಸ್ಪಷ್ಟಗೊಂಡಿದೆ. ಈ ಸಿನಿಮಾದಲ್ಲಿ ಪ್ರೀತಿ, ಫ್ಯಾಮಿಲಿ ಸೆಂಟಿಮೆಂಟ್ ಸೇರಿದಂತೆ ಎಲ್ಲ ಅಂಶಗಳೂ ಇವೆ. ಆದರೆ ಅದೆಲ್ಲದರಲ್ಲಿ ಹೈ ವೋಲ್ಟೇಜ್ ಸಾಹಸ ಸನ್ನಿವೇಶಗಳು ಮತ್ತು ನಾಯಕ ಮನುಷ್ ಅದನ್ನು ನಿರ್ವಹಿಸಿರೋ ರೀತಿ ಪ್ರಧಾನವಾಗಿ ಗುರುತಿಸಿಕೊಳ್ಳುತ್ತದೆ.
ಈ ಚಿತ್ರದಲ್ಲಿ ಮನುಷ್, ಮಧುಮಿತ ಮತ್ತು ಲಕ್ಷ್ಮಿ ಮಂಡ್ಯ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಮನುಷ್ ಪಾಲಿಗೆ ನಾಯಕನಾಗಿ ಇದು ಮೊದಲ ಅನುಭವ. ಆದರೆ ಆತ ಇಲ್ಲಿ ಮೈ ಝುಂ ಎನ್ನಿಸುವಂಥಾ ಸಾಹಸ ಸನ್ನಿವೇಶಗಳಲ್ಲಿ ಎಲ್ಲರೂ ಬೆರಗಾಗುವಂತೆ ನಟಿಸಿದ್ದಾರಂತೆ. ಸಾಹಸ ನಿರ್ದೇಶಕ ಶಿವು ಇಲ್ಲಿ ಕಥೆಗೆ ಪೂರಕವಾಗಿ, ಮನುಷ್ ಪ್ರತಿಭೆ, ತಾಕತ್ತುಗಳನ್ನು ಸಂಪೂರ್ಣವಾಗಿ ಬಳಸಿಕೊಂಡು ಸಾಹಸ ಸನ್ನಿವೇಶಗಳನ್ನು ರೂಪಿಸಿದ್ದಾರಂತೆ. ಅದರ ಕೆಲ ಝಲಕ್ಕುಗಳು ಮಾತ್ರವೇ ಟ್ರೇಲರ್ನಲ್ಲಿ ಕಾಣಿಸಿದೆ. ಆದರೆ ಚಿತ್ರದುದ್ದಕ್ಕೂ ಅಲ್ಲಲ್ಲಿ ಅಸಲೀ ಶಕ್ತಿಯಂತೆ ಈ ಸಾಹಸ ಸನ್ನಿವೇಶಗಳು ಗರಿಗೆದರಿಕೊಳ್ಳಲಿವೆಯಂತೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕಥಾ ಸಂಗಮ: ರಿಷಬ್ ಶೆಟ್ಟಿ ಹೊಳೆಯಿಸಿದ ಏಳು ಮುತ್ತುಗಳು!