Select Your Language

Notifications

webdunia
webdunia
webdunia
webdunia

6 ಕೋಟಿ ರೂಪಾಯಿಗೆ ಮಾರಾಟವಾದ ಈ ಬೈಕ್ ಏನಿದರ ವಿಶೇಷ...!

6 ಕೋಟಿ ರೂಪಾಯಿಗೆ ಮಾರಾಟವಾದ ಈ ಬೈಕ್ ಏನಿದರ ವಿಶೇಷ...!

ಗುರುಮೂರ್ತಿ

ಬೆಂಗಳೂರು , ಸೋಮವಾರ, 5 ಫೆಬ್ರವರಿ 2018 (18:48 IST)
ಹಳೆಯ ಕಾಲದ ಕಾರುಗಳು ಹರಾಜಿನಲ್ಲಿ ಕೋಟಿಗಳಷ್ಟು ಇಲ್ಲವೇ ಲಕ್ಷಗಳಷ್ಟು ಬೆಲೆಗೆ ಮಾರಾಟವಾಗಿರುವುದನ್ನು ನೀವು ನೋಡಿರುತ್ತೀರಿ ಆದರೆ ಬೈಕ್ ಮಾರಾಟವಾಗಿರುವುದು ನೀವು ಕೇಳಿದ್ದೀರಾ...! ಹೌದು ಈ ಬೈಕ್, ಹರಾಜಿನಲ್ಲಿ ಸುಮಾರು 6 ಕೋಟಿ ರೂಪಾಯಿಗೆ ಮಾರಾಟವಾಗುವುದರ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದೆ. ಹಾಗಾದರೆ ಈ ಬೈಕ್‌ನಲ್ಲಿ ಅಂತಹ ವಿಶೇಷವೇನಿದೆ ಎಂದು ತಿಳಿಯುವ ಕೂತುಹಲ ನಿಮಗಿದೆಯೇ ಈ ವರದಿಯನ್ನು ಓದಿ.
1951 ರಲ್ಲಿ ಟಾಪ್ ಬೈಕ್‌ ಎಂದೇ ಖ್ಯಾತಿ ಹೊಂದಿದ್ದ ವಿನ್ಸೆಂಟ್ ಬ್ಲ್ಯಾಕ್ ಲೈಟ್ನಿಂಗ್ ಮೋಟಾರ್‌ಸೈಕಲ್, ಲಾಸ್ ವೆಗಾಸ್‌ನಲ್ಲಿ ಆಯೋಜಿಸಲಾದ ಬೊನ್ಹಾಮ್ಸ್ ಹರಾಜಿನಲ್ಲಿ 6 ಕೋಟಿ ರೂಪಾಯಿಗಳಿಗೆ ಮಾರಾಟವಾಗುವ ಮೂಲಕ ಅತೀ ಹೆಚ್ಚು ಬೆಲೆಗೆ ಮಾರಾಟವಾದ ಬೈಕ್‌ಗಳ ಪಟ್ಟಿಯನ್ನು ಸೇರಿದೆ. ಅಷ್ಟೇ ಅಲ್ಲ, ಆ ಕಾಲದಲ್ಲಿ ಈ ಮಾದರಿಯ 30 ಬೈಕ್‌ಗಳನ್ನು ಮಾತ್ರ ತಯಾರಿಸಲಾಗಿದ್ದು, ಇದು ನೋಡಲು ತುಂಬಾ ಆಕರ್ಷಕವಾಗಿದೆ ಎಂದೇ ಹೇಳಬಹುದು. ಆ ಕಾಲದ ಬ್ಲಾಕ್ ಷಾಡೋ ಆವೃತ್ತಿಯ ಮಾದರಿಯಿಂದ ಸ್ಫೂರ್ತಿಗೊಂಡು ಲೈಟ್ನಿಂಗ್ ಮಾದರಿಯ ಬೈಕ್ ಅನ್ನು ತಯಾರಿಸಲಾಗಿದ್ದು, ಇದು ವಿಶ್ವದ ಮೊದಲ ಸುಪರ್ ಬೈಕ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು ಎನ್ನುವುದೇ ವಿಶೇಷ.
 
ಈ ಮೊದಲು 2015 ರ ಹರಾಜಿನಲ್ಲಿ ಸ್ಟೀವ್ ಎಮ್‌ಸಿಕ್ಲೀನ್ ಒಡೆತನದ 1915 ರ ಸೈಕ್ಲೋನ್ ಬೈಕ್ 4.9 ಕೋಟಿ ರುಪಾಯಿಗಳಿಗೆ ಮಾರಾಟವಾಗಿತ್ತು. ಆದರೆ ಇದೀಗ ಜ್ಯಾಕ್ ಎರೆಟ್ ಆಸ್ಟ್ರೇಲಿಯಾದ ಲ್ಯಾಂಡ್ ಸ್ವೀಡ್ ರೆಕಾರ್ಡ್‌ನಲ್ಲಿ ಬಳಸಿದ ಈ ಬೈಕ್ ಹೆಚ್ಚಿನ ಬೆಲೆಗೆ ಮಾರಾಟವಾಗುವ ಮೂಲಕ ಎಲ್ಲಾ ಹಳೆಯ ದಾಖಲೆಗಳನ್ನು ಮುರಿದಿದೆ ಎಂದೇ ಹೇಳಬಹುದು.
webdunia
ಅಲ್ಲದೇ ಇದೊಂದು ರೇಸ್ ಅವಾರ್ಡ್ ವಿನ್ನಿಂಗ್ ಬೈಕ್ ಆಗಿರುವುದರಿಂದ ಮತ್ತು ಇದನ್ನು ಮರುನಿರ್ಮಾಣ ಮಾಡಿರುವ ಕಾರಣ ಇದು ಹೆಚ್ಚಿನ ಬೆಲೆಗೆ ಮಾರಾಟವಾಗಿದೆ ಎಂಬುದು ಕೆಲವರ ಹೇಳಿಕೆಯಾಗಿದೆ. ಈ ಬೈಕ್ ಅನ್ನು 1948 ಮತ್ತು 1952 ರ ನಡುವೆ ತಯಾರಿಸಲಾಗಿದ್ದು, ಇದು 998 ಸಿಸಿ ಎಂಜಿನ್ ಹೊಂದಿದೆ ಜೊತೆಗೆ OHV, ಏರ್ ಕೂಲ್ಡ್ ತಂತ್ರಜ್ಞಾನ ಮತ್ತು V-ಟ್ವೀನ್ ಮೋಟಾರ್‌ನೊಂದಿಗೆ 70 bhp ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಈ ಬೈಕ್ ಹೊಂದಿದೆ. ಇದರ ಗರಿಷ್ಟ ವೇಗವು 241 kmph ಆಗಿದ್ದು, 380 ಪೌಂಡ್‌ಗಳಷ್ಟು ತೂಕವನ್ನು ಈ ಬೈಕ್ ಹೊಂದಿದೆ. ಅಲ್ಲದೇ ಅಂದಿನ ಕಾಲದಲ್ಲಿನ ಜಗತ್ತಿನ ಅತೀ ವೇಗದ ಬೈಕ್‌ಗಳಲ್ಲಿ ಇದು ಕೂಡಾ ಒಂದು ಎಂದೇ ಹೇಳಬಹುದು. 
 
ಒಟ್ಟಿನಲ್ಲಿ ವಿಂಟೇಜ್ ಬೈಕುಗಳ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇಂದಿನ ಕಾಲದ ಬೈಕುಗಳಿಗೆ ಹೋಲಿಸಿದರೆ ಹಳೆ ಕಾಲದ ಬೈಕುಗಳು ಇಂದಿಗೂ ಜನರ ಮನಸ್ಸಲ್ಲಿ ಮನೆ ಮಾಡಿವೆ ಎಂಬುದಕ್ಕೆ ಇದು ಒಂದು ಉತ್ತಮ ಉದಾಹರಣೆ ಎಂದೇ ಹೇಳಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ನೀವು ಶ್ರೀಮಂತರಾ, ಬಡವರಾ ಎಂಬುದನ್ನು ಇನ್ನು ಮುಂದೆ ಫೇಸ್‌ಬುಕ್ ಹೇಳಲಿದೆ