ಬೆಂಗಳೂರು: ಸಾಮಾನ್ಯವಾಗಿ ನಮ್ಮ ಆದಾಯದ ಹಣ ನೇರವಾಗಿ ಬಂದು ಬೀಳುವುದು ಸೇವಿಂಗ್ಸ್ ಖಾತೆ ಅಥವಾ ಎಸ್ ಬಿ ಖಾತೆಗೇ ಆಗಿರುತ್ತದೆ. ಆದರೆ ಎಸ್ ಬಿ ಖಾತೆಯಲ್ಲಿ ಎಷ್ಟು ಹಣವಿಟ್ಟುಕೊಳ್ಳುವುದು, ಇದು ಸುರಕ್ಷಿತವೇ ಇಲ್ಲಿ ನೋಡಿ.
ನಮ್ಮ ದೈನಂದಿನ ಖರ್ಚು ವೆಚ್ಚಗಳಿಗೆ ನಾವು ಸೇವಿಂಗ್ಸ್ ಖಾತೆಯನ್ನೇ ಅವಲಂಬಿಸಿರುತ್ತೇವೆ. ಜೊತೆಗೆ ಇತ್ತೀಚೆಗಿನ ದಿನಗಳಲ್ಲಿ ಯುಪಿಐ ಟ್ರಾನ್ಸೇಕ್ಷನ್ ಕೂಡಾ ಬಂದಿರುವುದರಿಂದ ಸೇವಿಂಗ್ಸ್ ಖಾತೆಯಲ್ಲಿ ಹಣ ಇಟ್ಟುಕೊಳ್ಳದೇ ವಿಧಿಯಿಲ್ಲ ಎನ್ನುವ ಪರಿಸ್ಥಿತಿಯಿದೆ. ಆದರೆ ಸೇವಿಂಗ್ಸ್ ಖಾತೆಯಲ್ಲಿ ಎಷ್ಟು ಹಣವಿರಬೇಕು ಎಂಬುದೂ ತಿಳಿದಿರಲಿ.
ಕೆಲವರು ತಮ್ಮೆಲ್ಲಾ ದುಡಿದ ಹಣವನ್ನು ಸೇವಿಂಗ್ಸ್ ಖಾತೆಯಲ್ಲಿಯೇ ಇಟ್ಟುಕೊಳ್ಳುತ್ತಾರೆ. ಇತ್ತೀಚೆಗಿನ ದಿನಗಳಲ್ಲಿ ಆನ್ ಲೈನ್ ವಂಚನೆಗಳು ಹೆಚ್ಚಾಗಿರುವುದರಿಂದ ಸೇವಿಂಗ್ಸ್ ಖಾತೆಯಲ್ಲಿ ಹೆಚ್ಚು ಹಣವಿಟ್ಟುಕೊಳ್ಳುವುದು ಸುರಕ್ಷಿತವಲ್ಲ. ಈಗೆಲ್ಲಾ ಮೊಬೈಲ್ ಆಪ್ ಮೂಲಕವೇ ಸೇವಿಂಗ್ಸ್ ಖಾತೆಯಲ್ಲಿರುವ ಹಣವನ್ನು ಕುಳಿತಲ್ಲಿಂದಲೇ ಎಫ್ ಡಿ ಮಾಡಿಕೊಳ್ಳಬಹುದು. ಹೀಗಾಗಿ ಸೇವಿಂಗ್ಸ್ ಖಾತೆಯಲ್ಲಿ ಹೆಚ್ಚು ಹಣವಿಟ್ಟುಕೊಳ್ಳದೇ ಎಫ್ ಡಿ ಮಾಡಿಟ್ಟುಕೊಳ್ಳುವುದೇ ಸುರಕ್ಷಿತ ಎಂದು ಬ್ಯಾಂಕ್ ಸಿಬ್ಬಂದಿಗಳೇ ಸಲಹೆ ನೀಡುತ್ತಾರೆ.
ಇದಲ್ಲದೆ, ಸೇವಿಂಗ್ಸ್ ಖಾತೆಯಲ್ಲಿ ಹಣವಿಟ್ಟರೆ ಅದಕ್ಕೆ ಬಡ್ಡಿದರ ತೀರಾ ಕಡಿಮೆ. ಹೀಗಾಗಿ ಇದರಿಂದ ನಿಮ್ಮ ಹಣ ಬೆಳೆಯದು. ಇದರಿಂದ ನಿಮಗೆ ನಷ್ಟವಾಗಬಹುದು. ಹೀಗಾಗಿ ಒಂದು ಮಟ್ಟಿಗೆ ಖರ್ಚು ವೆಚ್ಚಗಳಿಗಾಗಿ 50 ಸಾವಿರ ರೂ.ವರೆಗೆ ಸೇವಿಂಗ್ಸ್ ಖಾತೆಯಲ್ಲಿಟ್ಟುಕೊಂಡು ಉಳಿದಿದ್ದನ್ನು ಎಫ್ ಡಿ ಆಗಿ ಇಟ್ಟುಕೊಳ್ಳಬಹುದು.