ಬೆಂಗಳೂರು: ಈಗಿನ ಕಾಲದಲ್ಲಿ ಮಕ್ಕಳು ಚಿಕ್ಕವರಿದ್ದಾಗಲೇ ಅವರ ಹೆಸರಿನಲ್ಲಿ ಪೋಷಕರು ದುಡ್ಡು ಕೂಡಿಡುವುದು ಸಾಮಾನ್ಯ. ಮಕ್ಕಳ ಹೆಸರಿನಲ್ಲೇ ಖಾತೆ ತೆರೆಯಲು ಎಷ್ಟು ವರ್ಷವಾಗಬೇಕು ಇಲ್ಲಿದೆ ವಿವರ.
ಇಂದು ಹಲವು ಬ್ಯಾಂಕ್ ಗಳು ಮಕ್ಕಳಿಗೆಂದೇ ಸೇವಿಂಗ್ಸ್ ಖಾತೆಯ ವಿಶೇಷ ಆಫರ್ ಗಳನ್ನು ನೀಡುತ್ತಿವೆ. ಅದರ ಹೊರತಾಗಿಯೂ ಮಕ್ಕಳ ಹೆಸರಿನಲ್ಲಿ ಸೇವಿಂಗ್ಸ್ ಖಾತೆ ತೆರೆಯಲು ವಯಸ್ಸಿನ ಮಿತಿಯೇನೂ ಇಲ್ಲ. ಆದರೆ 10 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಮಕ್ಕಳಾದರೆ ಕೆಲವೊಂದು ನಿಬಂಧನೆಗಳಿವೆ.
10 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಮಕ್ಕಳ ಹೆಸರಿನಲ್ಲಿ ಸೇವಿಂಗ್ಸ್ ಖಾತೆ ಮಾಡುವುದಿದ್ದರೆ ತಂದೆ ಅಥವಾ ತಾಯಿ ಖಾತೆಯ ಗಾರ್ಡಿಯನ್ ಆಗಿರುತ್ತಾರೆ. ಮಕ್ಕಳ ಹೆಸರಿನಲ್ಲಿ ಖಾತೆ ತೆರೆಯುವಾಗ ತಂದೆ ಅಥವಾ ತಾಯಿಯ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಸೇರಿದಂತೆ ದಾಖಲಾತಿಗಳೂ ಅಗತ್ಯವಿರುತ್ತದೆ. 10 ವರ್ಷಕ್ಕಿಂತ ಮೇಲ್ಪಟ್ಟರೆ ಅವರ ಖಾತೆಗಳನ್ನು ಅವರೇ ನಿಭಾಯಿಸಬಹುದಾಗಿದೆ.
ಫಿಕ್ಸೆಡ್ ಡೆಪಾಸಿಟ್ ಇಡುವ ಸಂದರ್ಭದಲ್ಲೂ ಮಕ್ಕಳು ಅಪ್ರಾಪ್ತರಾಗಿದ್ದರೆ ತಂದೆ-ತಾಯಿ ರಕ್ಷಕರಾಗಿರುತ್ತಾರೆ. ತಂದೆ ಅಥವಾ ತಾಯಿಯ ದಾಖಲೆಯನ್ನೂ ಒದಗಿಸಬೇಕಾಗುತ್ತದೆ. 10 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಾಗಿದ್ದರೆ ಸೇವಿಂಗ್ಸ್ ಖಾತೆಗೆ ಕೆಲವೊಂದು ಬ್ಯಾಂಕ್ ಗಳು ಎಟಿಎಂ ಕಾರ್ಡ್ ಸೌಲಭ್ಯವನ್ನೂ ನೀಡುತ್ತದೆ.