ನವದೆಹಲಿ: ನವರಾತ್ರಿ ಸಂದರ್ಭದ ರಿಯಾಯಿತಿ ಜೊತೆಗೆ ಜಿಎಸ್ ಟಿ ಕಡಿತವೂ ಆಗಿರುವುದರಿಂದ ಈಗ ಕಾರು ಖರಿದಿಗೆ ಜನ ಮುಗಿಬಿದ್ದಿದ್ದು, ಸಣ್ಣ ಕಾರುಗಳ ಖರೀದಿಯಲ್ಲಿ ದಾಖಲೆಯೇ ಆಗಿದೆ.
ಕೇಂದ್ರ ಸಣ್ಣ ಕಾರುಗಳ ಮೇಲೆ ಜಿಎಸ್ ಟಿ ಕಡಿತ ಮಾಡುತ್ತಿದ್ದಂತೇ ಸಾಕಷ್ಟು ಜನ ಹೊಸ ಕಾರು ಖರೀದಿಗೆ ಪ್ಲ್ಯಾನ್ ಮಾಡಿಕೊಂಡಿದ್ದರು. ಇದೀಗ ದಸರಾ ಹಬ್ಬದ ನಿಮಿತ್ತ ಕಾರು ಖರೀದಿಗೆ ಜನ ಶೋ ರೂಂ ಕಡೆಗೆ ಲಗ್ಗೆಯಿಡುತ್ತಿದ್ದಾರೆ. ಇದರಿಂದಾಗಿ 35 ವರ್ಷಗಳಲ್ಲೇ ಮಾರುತಿ ಸುಜುಕಿ ಅತೀ ಹೆಚ್ಚು ಕಾರು ಮಾರಾಟವಾದ ದಾಖಲೆ ಮಾಡಿದೆ. ಇದುವರೆಗೆ 30000 ಕಾರುಗಳು ಮಾರಾಟವಾದ ಮಾಹಿತಿ ಬಂದಿದೆ.
ಇನ್ನು, ಬೇರೆ ಕಂಪನಿ ಕಾರುಗಳಿಗೂ ಬೇಡಿಕೆ ಬಂದಿದೆ.ಹುಂಡೈ, ಟಾಟಾ ಮೋಟಾರ್ಸ್ ಕಾರುಗಳೂ ದಾಖಲೆಯ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ. ಇನ್ನು ಕೆಲವರು ಯಾವ ಕಾರು ಬೆಸ್ಟ್, ಯಾವುದಕ್ಕೆ ಬೆಲೆ ಕಡಿಮೆ ಎಂದು ವಿಚಾರಣೆಗಾಗಿಯೇ ಬರುತ್ತಿದ್ದಾರೆ.
ಕೇವಲ ಕಾರುಗಳು ಮಾತ್ರವಲ್ಲ, ದಿನ ಬಳಕೆಯ ಇತರೆ ವಸ್ತುಗಳ ಖರೀದಿ ಭರಾಟೆಯೂ ಜೋರಾಗಿದೆ. ಎಸಿ, ಫ್ರಿಡ್ಜ್, ವಾಷಿಂಗ್ ಮೆಷಿನ್, ಟಿವಿ ಖರೀದಿಯ ಪ್ರಮಾಣ ದುಪ್ಪಟ್ಟಾಗಿದೆ ಎಂದು ತಿಳಿದುಬಂದಿದೆ. ಎಲ್ಲವೂ ಜಿಎಸ್ ಟಿ ಕಡಿತದ ಪರಿಣಾಮವಾಗಿದ್ದು, ಗ್ರಾಹಕರ ಜೊತೆಗೆ ಮಾರಾಟಗಾರರೂ ಖುಷಿಯಾಗಿದ್ದಾರೆ.