ಲಖನೌ: ಇಂಡಿಯನ್ ಪ್ರೀಮಿಯರ್ ಲೀಗ್‌ನ ಇಂದಿನ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡವು ತನ್ನ ತವರಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.
ಈ ಪಂದ್ಯದ ವಿಶೇಷವೆಂದರೆ ಕಳೆದ ಬಾರಿ ಡೆಲ್ಲಿ ತಂಡವನ್ನು ಮುನ್ನಡೆಸಿದ್ದ ರಿಷಭ್ ಪಂತ್ ಈ ಬಾರಿ ಲಖನೌ ತಂಡದ ನಾಯಕರಾಗಿದ್ದಾರೆ. ಕಳೆದ ಬಾರಿ ಲಖನೌ ತಂಡದ ಸಾರಥಿಯಾಗಿದ್ದ ಕನ್ನಡಿಗ ಕೆ.ಎಲ್. ರಾಹುಲ್ ಈಗ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದಾರೆ.
ಕಳೆದ ಬಾರಿ ಲಖನೌ ತಂಡ ಕಳಪೆ ಪ್ರದರ್ಶನ ನೀಡಿದ್ದಕ್ಕಾಗಿ ಮೈದಾನದಲ್ಲೇ ಮಾಲೀಕ ಸಂಜೀವ್ ಗೋಯಾಂಕಾ ಅವರು ರಾಹುಲ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಇದು ಭಾರೀ ಚರ್ಚೆಗೆ ಕಾರಣವಾಗಿತ್ತು. ನಂತರದ ರಾಹುಲ್ ಅವರನ್ನು ಬಿಡುಗಡೆ ಮಾಡಲಾಗಿತ್ತು.
ಮೆಗಾ ಹರಾಜಿನಲ್ಲಿ ಬರೋಬ್ಬರಿ ₹27 ಕೋಟಿಗೆ ಪಂತ್ ಅವರನ್ನು ಲಖನೌ ತಂಡ ಖರೀದಿಸಿತ್ತು. ಆದರೆ, ಪಂತ್ ಈ ಬಾರಿ ರನ್ ಬರ ಎದುರಿಸುತ್ತಿದ್ದಾರೆ. ಡೆಲ್ಲಿ ತಂಡವು ₹14 ಕೋಟಿಗೆ ರಾಹುಲ್ ಅವರನ್ನು ಖರೀದಿ ಮಾಡಿತ್ತು. ಅವರು ಉತ್ತಮ ಲಯದಲ್ಲಿದ್ದಾರೆ.
ಕೆಲ ವಾರಗಳ ಹಿಂದೆ ಇದೇ ತಂಡಗಳು ಮುಖಾಮುಖಿಯಾಗಿದ್ದವು. ಆ ಪಂದ್ಯಕ್ಕೆ ರಾಹುಲ್ ಅಲಭ್ಯರಾಗಿದ್ದರು. ಆ ಪಂದ್ಯವನ್ನು ಡೆಲ್ಲಿ ತಂಡವನ್ನು ರೋಚಕವಾಗಿ ಒಂದು ವಿಕೆಟ್‌ನಿಂದ ಗೆದ್ದಿತ್ತು. ಇದೀಗ ಲಖನೌ ತಂಡವು ಸೋಲಿನ ಮುಯ್ಯಿ ತೀರಿಸಲು ಸಜ್ಜಾಗಿದೆ.