ಮುಂಬೈ: ಮುಂಬೈ ಇಂಡಿಯನ್ಸ್ ತಂಡದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಅವರು ಭಾನುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಮಹತ್ವದ ದಾಖಲೆಯೊಂದನ್ನು ಮುರಿದರು.
ರನ್ ಮಿಷಿನ್ ಖ್ಯಾತಿಯ ವಿರಾಟ್ ಕೊಹ್ಲಿ ಅವರ ಪಂದ್ಯಶ್ರೇಷ್ಠ ದಾಖಲೆಯನ್ನು ರೋಹಿತ್ ಮುರಿದರು. ಈಚೆಗೆ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅಜೇಯ 76 ರನ್ ಗಳಿಸಿದ ರೋಹಿತ್ ಐಪಿಎಲ್‌ನಲ್ಲಿ 20ನೇ ಬಾರಿ ಪಂದ್ಯದ ಆಟಗಾರ ಗೌರವಕ್ಕೆ ಪಾತ್ರವಾದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಮಾಜಿ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ತಮ್ಮ 184 ಐಪಿಎಲ್ ಪಂದ್ಯಗಳಲ್ಲಿ 25 ಪಂದ್ಯಶ್ರೇಷ್ಠ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇದು ಐಪಿಎಲ್‌ನ ಇತಿಹಾಸದಲ್ಲೇ ಉತ್ತಮ ದಾಖಲೆಯಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಮಾಜಿ ಆರಂಭಿಕ ಆಟಗಾರ ಕ್ರಿಸ್ ಗೇಲ್ ತಮ್ಮ ಐಪಿಎಲ್ ವೃತ್ತಿಜೀವನದ 142 ಪಂದ್ಯಗಳಲ್ಲಿ 22 ಪಂದ್ಯಶ್ರೇಷ್ಠ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇದು ಎರಡನೇ ಅತ್ಯುತ್ತಮ ದಾಖಲೆಯಾಗಿದೆ.
ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ ಆಡಿರುವ 264 ಐಪಿಎಲ್ ಪಂದ್ಯಗಳಲ್ಲಿ 20 ಪಂದ್ಯಶ್ರೇಷ್ಠ ಪ್ರಶಸ್ತಿಗಳನ್ನು ಗೆದ್ದು ಮೂರನೇ ಸ್ಥಾನದಲ್ಲಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ದಿಗ್ಗಜ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ 19 ಬಾರಿ ಪಂದ್ಯದ ಆಟಗಾರ ಗೌರವ ಪಡೆದಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ಹಂಗಾಮಿ ನಾಯಕ ಎಂಎಸ್ ಧೋನಿ ಮತ್ತು ಡೇವಿಡ್ ವಾರ್ನರ್ ಅವರು ತಲಾ 18 ಬಾರಿ ಪ್ರಶಸ್ತಿಗೆ ಪಾತ್ರವಾಗಿದ್ದಾರೆ.