ಮುಂಬೈ: ಐಪಿಎಲ್‌ನ ಇಂದಿನ ಹೈವೋಲ್ಟೇಜ್ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಕಳೆದ ಬಾರಿಯ ರನ್ನರ್ಸ್ ಅಪ್ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.
ಟಾಸ್ ಗೆದ್ದ ಆತಿಥೇಯ ಮುಂಬೈ ಇಂಡಿಯನ್ಸ್ ತಂಡ ಬೌಲಿಂಗ್ ಆಯ್ದುಕೊಂಡಿದೆ. ಸ್ಪೋಟಕ ಬ್ಯಾಟರ್‌ಗಳನ್ನು ಒಳಗೊಂಡ ಹೈದರಾಬಾದ್ ಮೊದಲು ಬ್ಯಾಟಿಂಗ್ ಮಾಡಲಿದ್ದು, ರನ್ ಹೊಳೆ ಹರಿಯುವ ನಿರೀಕ್ಷೆಯಿದೆ.
ಉಭಯ ತಂಡಗಳು ತಲಾ ಆರು ಪಂದ್ಯಗಳಲ್ಲಿ ಆಡಿದ್ದು, ನಾಲ್ಕರಲ್ಲಿ ಮುಗ್ಗರಿಸಿವೆ. ಪಾಯಿಂಟ್ ಪಟ್ಟಿಯಲ್ಲಿ ಮುಂಬೈ 7ನೇ ಸ್ಥಾನದಲ್ಲಿದ್ದರೆ, ಹೈದರಾಬಾದ್ 9ನೇ ಸ್ಥಾನದಲ್ಲಿದೆ.
ಬಿರುಸಿನ ಹೊಡೆತಗಳಿಗೆ ಹೆಸರಾಗಿರುವ ಸನ್‌ರೈಸರ್ಸ್ ಬ್ಯಾಟರ್‌ಗಳು ಹಾಗೂ ಮುಂಬೈನ ಶ್ರೇಷ್ಠ ಬೌಲಿಂಗ್ ವಿಭಾಗದ ನಡುವಣ ಹೋರಾಟಕ್ಕೆ ಈ ಪಂದ್ಯವು ಸಾಕ್ಷಿಯಾಗಲಿದೆ. ಗಾಯದಿಂದ ಸುಮಾರು ಮೂರು ತಿಂಗಳು ವಿಶ್ರಾಂತಿಯಲ್ಲಿದ್ದ ಮುಂಬೈ ವೇಗಿ ಜಸ್‌ಪ್ರೀತ್ ಬೂಮ್ರಾ ಐಪಿಎಲ್‌ಗೆ ಮರಳಿದ್ದಾರೆ. ಆದರೆ, ಆಡಿದ ಎರಡು ಪಂದ್ಯಗಳಲ್ಲಿಯೂ ಅವರು ಅಷ್ಟೇನೂ ಪರಿಣಾಮಕಾರಿ ಬೌಲಿಂಗ್ ಮಾಡಿಲ್ಲ. ಹಾಗಾಗಿ, ಅವರಿಗೆ ಈ ಪಂದ್ಯದಲ್ಲಿ ಕಠಿಣ ಪರೀಕ್ಷೆ ಎದುರಾಗಿದೆ.
ಬೂಮ್ರಾ ಮಾತ್ರವಲ್ಲದೆ, ಟ್ರೆಂಟ್ ಬೌಲ್ಟ್, ದೀಪಕ್ ಚಹಾರ್ ಕೂಡ ಉತ್ತಮ ಬೌಲಿಂಗ್ ಮಾಡಬೇಕಿದೆ. ಸ್ಫೋಟಕ ಬ್ಯಾಟಿಂಗ್ ನಡೆಸುವ ಅಭಿಷೇಕ್ ಶರ್ಮಾ, ಬೀಸು ಹೊಡೆತಗಳ ಪರಿಣತರಾದ ಇಶಾನ್ ಕಿಶನ್, ಟ್ರಾವಿಸ್ ಹೆಡ್ ಮತ್ತು ಹೆನ್ರಿಚ್ ಕ್ಲಾಸೆನ್ ಅವರನ್ನು ಕಟ್ಟಿಹಾಕುವುದು ಕಠಿಣ ಅವರ ಮುಂದೆ ಇದೆ.
ಸ್ಟಾರ್ ಬ್ಯಾಟರ್ ರೋಹಿತ್ ಶರ್ಮಾ ಕೂಡ ಲಯ ಕಂಡುಕೊಳ್ಳಲು ಪರದಾಡುತ್ತಿರುವುದು ನಾಯಕ ಹಾರ್ದಿಕ್ ಪಾಂಡ್ಯಗೆ ತಲೆನೋವಾಗಿದೆ. ಮುಂಬೈನ ಬ್ಯಾಟಿಂಗ್ ವಿಭಾಗವು ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಅವರ ಮೇಲೆ ಅವಲಂಬಿತವಾಗಿದೆ.