ಮುಂಬೈ: ಬೌಲಿಂಗ್ ಬಳಿಕ ಬ್ಯಾಟಿಂಗ್‌ನಲ್ಲಿ ಸಾಂಘಿಕ ಪ್ರದರ್ಶನ ನೀಡಿದ ಮುಂಬೈ ಇಂಡಿಯಲ್ಸ್ ತಂಡವು ತನ್ನ ತವರು ವಾಂಖೆಡೆ ಕ್ರೀಡಾಂಗಣದಲ್ಲಿ ಅಭಿಮಾನಿಗಳ ಎದುರು ಗೆದ್ದು ಬೀಗಿತು. ಸನ್‌ರೈಸರ್ಸ್ ಹೈದರಾಬಾದ್ ತಂಡವು ಐಪಿಎಲ್‌ನ ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳ ಸೋಲು ಅನುಭವಿಸಿತು.
ಟಾಸ್ ಗೆದ್ದ ಆತಿಥೇಯ ಮುಂಬೈ ಇಂಡಿಯನ್ಸ್ ತಂಡ ಬೌಲಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್‌ಗೆ ಇಳಿದ ಹೈದರಾಬಾದ್ ತಂಡಕ್ಕೆ ಆರಂಭಿಕ ಆಟಗಾರರಾದ ಅಭಿಷೇಕ್ ಶರ್ಮಾ (40 ರನ್) ಮತ್ತು ಟ್ರಾವಿಸ್ ಹೆಡ್ (28 ರನ್) ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್‌ಗೆ 59 ರನ್ ಸೇರಿಸಿದರು.
ಅಭಿಷೇಕ್ ಶರ್ಮಾ ಮತ್ತು ಹೆನ್ರಿಚ್ ಕ್ಲಾಸೆನ್ (37 ರನ್) ಅವರ ಬ್ಯಾಟಿಂಗ್ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಐಪಿಎಲ್‌ನ ಪಂದ್ಯದಲ್ಲಿ 20 ಓವರ್‌ಗಳಲ್ಲಿ ಐದು ವಿಕೆಟ್‌ಗೆ 162 ರನ್‌ಗಳ ಸಾಧಾರಣ ಮೊತ್ತ ಕಲೆ ಹಾಕಿತ್ತು.
ಮುಂಬೈ ತಂಡದ ಪರ ವಿಲ್ ಜ್ಯಾಕ್ಸ್ ಎರಡು ವಿಕೆಟ್ ಪಡೆದರು. ಟ್ರಂಟ್ ಬೌಲ್ಟ್, ಜಸ್‌ಪ್ರೀತ್ ಬೂಮ್ರಾ ಮತ್ತು ಹಾರ್ದಿಕ್ ಪಾಂಡ್ಯ ತಲಾ ಒಂದು ವಿಕೆಟ್ ಪಡೆದರು.
ಗುರಿಯನ್ನು ಬೆನ್ನತ್ತಿದ ಮುಂಬೈ ತಂಡವು 18.1 ಓವರ್‌ಗಳಲ್ಲಿ ಐದು ವಿಕೆಟ್‌ಗೆ 166 ರನ್ ಗಳಿಸಿ ಗೆಲುವು ಸಾಧಿಸಿತು. ರಿಯಾನ್ ರಿಕೆಲ್‌ಸನ್ (31), ವಿಲ್ ಜ್ಯಾಕ್ಸ್ 36 ರನ್ ಗಳಿಸಿ ಉಪಯುಕ್ತ ಕಾಣಿಕೆ ನೀಡಿದರು. ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಮೂರು ವಿಕೆಟ್ ಪಡೆದರು.