ಬೆಂಗಳೂರು: ಕಳೆದ ಐಪಿಎಲ್‌ನಲ್ಲಿ ಕೊನೆಯ ಹಂತದಲ್ಲಿ ಕೆಚ್ಚೆದೆಯ ಪ್ರದರ್ಶನ ನೀಡಿ ಪ್ಲೇ ಆಫ್ ಪ್ರವೇಶಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಬಾರಿ ತವರಿನಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಮುಗ್ಗರಿಸಿದೆ. ಆದರೆ, ತವರಿನಾಚೆ ನಡೆದ ಐದು ಪಂದ್ಯಗಳಲ್ಲಿ ಜಯಭೇರಿ ಬಾರಿಸಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈವರೆಗೆ 8 ಪಂದ್ಯಗಳನ್ನಾಡಿದೆ. ಇನ್ನುಳಿದಿರುವುದು ಕೇವಲ 6 ಪಂದ್ಯಗಳು ಮಾತ್ರ. ಈ ಆರು ಮ್ಯಾಚ್ಗಳಲ್ಲಿ 4 ಪಂದ್ಯಗಳನ್ನು ತವರಿನಲ್ಲಿ ಆಡಿದರೆ, ಇನ್ನೆರಡು ಪಂದ್ಯಗಳನ್ನು ದೆಹಲಿ ಮತ್ತು ಲಖನೌದಲ್ಲಿ ಆಡಲಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 18ರ ಮೊದಲಾರ್ಧ ಮುಗಿದು ದ್ವಿತೀಯಾರ್ಧದ ಪಂದ್ಯಗಳು ಶುರುವಾಗಿದೆ. ದ್ವಿತೀಯಾರ್ಧದ ಮೊದಲ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಲಿಷ್ಠ ಪಂಜಾಬ್ ಕಿಂಗ್ಸ್ ತಂಡವನ್ನು ಬಗ್ಗು ಬಡಿದಿದೆ. ಈ ಗೆಲುವಿನೊಂದಿಗೆ ಆರ್ಸಿಬಿ ತಂಡವು ಅಂಕ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ.
ಸದ್ಯ ಮೂರನೇ ಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮುಂದಿನ 6 ಪಂದ್ಯಗಳು ಬಹಳ ಮುಖ್ಯ. ಏಕೆಂದರೆ ಈ ಆರು ಮ್ಯಾಚ್ಗಳಲ್ಲಿ ಭರ್ಜರಿ ಜಯ ಸಾಧಿಸಿದರೆ ಆರ್ಸಿಬಿ ನೇರವಾಗಿ ಪ್ಲೇಆಫ್ಗೆ ಎಂಟ್ರಿ ಕೊಡಬಹುದು. ಸಾಮಾನ್ಯವಾಗಿ ಪ್ಲೇಆಫ್ ಪ್ರವೇಶಿಸಲು 16 ಅಂಕಗಳನ್ನು ಪಡೆದರೆ ಸಾಕು.
ಇದೀಗ ಆರ್ಸಿಬಿ ತಂಡವು ಒಟ್ಟು 10 ಅಂಕಗಳನ್ನು ಹೊಂದಿದೆ. ಇನ್ನುಳಿದ 6 ಮ್ಯಾಚ್ಗಳಲ್ಲಿ 3 ರಲ್ಲಿ ಗೆದ್ದರೆ 16 ಅಂಕಗಳು ಆಗಲಿದೆ. ಆದರೆ ಆರ್ಸಿಬಿ ತಂಡವು ಮುಂದಿನ 6 ಪಂದ್ಯಗಳಲ್ಲಿ 4 ಮ್ಯಾಚ್ಗಳನ್ನು ತವರಿನಲ್ಲಿ ಆಡಬೇಕಿದೆ. ಪ್ಲೇ ಆಫ್‌ಗೆ ಪ್ರವೇಶಿಸಲು ತವರಿನ ಗೆಲುವು ಅನಿವಾರ್ಯ.
ತವರು ಮೈದಾನದಲ್ಲಿ ಆರ್ಸಿಬಿ ಆಡಲಿರುವ 4 ಮ್ಯಾಚ್ಗಳಲ್ಲಿ ಕನಿಷ್ಠ 2 ಗೆಲುವು ಅತ್ಯವಶ್ಯಕ. ಇನ್ನುಳಿದ 2 ಪಂದ್ಯಗಳಲ್ಲಿ 1 ಗೆಲುವು ದಾಖಲಿಸಿದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 16 ಅಂಕಗಳನ್ನು ಪಡೆಯಲಿದೆ. ಈ ಮೂಲಕ ಆರ್ಸಿಬಿ ಪ್ಲೇಆಫ್ ಹಂತಕ್ಕೇರಬಹುದು.