ದುಬೈ: ಐಪಿಎಲ್ 14 ರಲ್ಲಿ ಯಾಕೋ ಧೋನಿ ಬ್ಯಾಟಿಂಗ್ ಕಳೆಗುಂದಿದೆ. ಇದು ಚೆನ್ನೈ ಸೂಪರ್ ಕಿಂಗ್ಸ್ ಗೆ ತಲೆನೋವಾಗಿದೆ.
ಬೆಸ್ಟ್ ಫಿನಿಶರ್ ಖ್ಯಾತಿಯ ಧೋನಿ ಈ ಕೂಟದಲ್ಲಿ ಇದುವರೆಗೆ ಹೇಳಿಕೊಳ್ಳುವಂತಹ ಇನಿಂಗ್ಸ್ ಆಡಿಲ್ಲ. ಇದೀಗ ಎರಡನೇ ಭಾಗದಲ್ಲೂ ಕಳಪೆ ಬ್ಯಾಟಿಂಗ್ ಮುಂದುವರಿದಿದೆ. ನಿನ್ನೆ ಕೆಕೆಆರ್ ವಿರುದ್ಧ ಸ್ಪಿನ್ನರ್ ವರುಣ್ ಚಕ್ರವರ್ತಿ ಬೌಲಿಂಗ್ ನಲ್ಲಿ ಅವರು ಬೌಲ್ಡ್ ಆದ ರೀತಿ ಅವರ ಬ್ಯಾಟಿಂಗ್ ವೈಫಲ್ಯಕ್ಕೆ ಹಿಡಿದ ಕನ್ನಡಿಯಂತಿದೆ.
ಇದರಿಂದಾಗಿ ರವೀಂದ್ರ ಜಡೇಜಾ ಮೇಲೆ ತೀವ್ರ ಒತ್ತಡ ಬೀಳುತ್ತಿದೆ. ಕೆಳ ಹಂತದಲ್ಲಿ ರನ್ ಗಳಿಸುವವರು ಇಲ್ಲದೇ ಹೋದರೆ ಐಪಿಎಲ್ ನಂತಹ ಚುಟುಕು ಕ್ರಿಕೆಟ್ ನಲ್ಲಿ ದೊಡ್ಡ ಮೊತ್ತ ಚೇಸ್ ಮಾಡುವುದು ಅಥವಾ ಗಳಿಸುವುದು ಕಷ್ಟ. 10 ಪಂದ್ಯಗಳಿಂದ ಅವರು ಗಳಿಸಿದ್ದು ಕೇವಲ 52 ರನ್. ನೆಟ್ಸ್ ನಲ್ಲಿ ದೊಡ್ಡ ಹೊಡೆತಗಳ ಮೂಲಕ ಭರ್ಜರಿ ಅಭ್ಯಾಸ ಮಾಡಿದ್ದ ಧೋನಿ ಫೀಲ್ಡ್ ನಲ್ಲಿ ಬ್ಯಾಟ್ ಬೀಸದೇ ಇರುವುದು ತಂಡಕ್ಕೆ ದೊಡ್ಡ ತಲೆನೋವಾಗಿದೆ.