Publish Date: Thu, 24 Sep 2020 (08:59 IST)
Updated Date: Thu, 24 Sep 2020 (09:10 IST)
ದುಬೈ: ಐಪಿಎಲ್ 13 ರ ಪಂದ್ಯದಲ್ಲಿ ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 49 ರನ್ ಗಳ ಭರ್ಜರಿ ಗೆಲುವು ಸಾಧಿಸಿದೆ.
ಈ ಮೂಲಕ ಮುಂಬೈ ಮೊದಲ ಗೆಲುವು ದಾಖಲಿಸಿದೆ. ಈ ಬಾರಿ ನಾಯಕ ರೋಹಿತ್ ಶರ್ಮಾ ಸಿಡಿದಿದ್ದೇ ಮುಂಬೈ ಬೃಹತ್ ಮೊತ್ತಕ್ಕೆ ಕಾರಣವಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿತು. ರೋಹಿತ್ 54 ಎಸೆತಗಳಿಂದ 80 ರನ್ ಚಚ್ಚಿದರೆ ಸೂರ್ಯಕುಮಾರ್ ಯಾದವ್ 28 ಎಸೆತಗಳಿಂದ 47 ರನ್ ಗಳಿಸಿದರು. ಆದರೆ ಕೊನೆಯ ಓವರ್ ಗಳಲ್ಲಿ ಮುಂಬೈಗೆ ನಿರೀಕ್ಷಿಸಿದಷ್ಟು ರನ್ ಬರಲಿಲ್ಲ. ಹೀಗಾಗಿ ಮೊತ್ತ 200 ರ ಗಡಿ ದಾಟಲಿಲ್ಲ.
ಈ ಮೊತ್ತ ಬೆನ್ನತ್ತಿದ ಕೆಕೆಆರ್ ಆರಂಭಿಕ ಆಘಾತ ಪಡೆಯಿತು. ಆಕ್ರಮಣಕಾರಿ ಆಟವಾಡಿದ ಪ್ಯಾಟ್ ಕ್ಯುಮಿನ್ಸ್ ಕೇವಲ 12 ಎಸೆತಗಳಿಂದ 33 ರನ್ ಸಿಡಿಸಿದರೆ ನಾಯಕ ದಿನೇಶ್ ಕಾರ್ತಿಕ್ 23 ಎಸೆತಗಳಿಂದ 30 ರನ್ ಗಳಿಸಿದರು. ಆದರೆ ಯಾರೂ ನಿಂತು ಆಡಿ ದೊಡ್ಡ ಮೊತ್ತ ಗಳಿಸದೇ ಇದ್ದಿದ್ದು ಕೆಕೆಆರ್ ಗೆ ಮುಳುವಾಯಿತು. ಅಂತಿಮವಾಗಿ ಕೆಕೆಆರ್ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಕೆಕೆಆರ್ ಕೂಟದ ಮೊದಲ ಪಂದ್ಯವನ್ನೇ ಸೋತಿತು.