Publish Date: Sun, 18 Oct 2020 (09:03 IST)
Updated Date: Sun, 18 Oct 2020 (09:04 IST)
ದುಬೈ: ಐಪಿಎಲ್ 13 ರ ನಿನ್ನೆಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕೊನೆಯ ಕ್ಷಣದಲ್ಲಿ ರೋಚಕ ಗೆಲುವು ಕೊಡಿಸಿದ ಎಬಿಡಿ ವಿಲಿಯರ್ಸ್ ಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.
ವಾಹ್.. ಎಬಿಡಿ ನೀವು ಜೀನಿಯಸ್ ಎಂದು ಸಾಮಾಜಿಕ ಜಾಲತಾಣದಲ್ಲಿ ಅವರನ್ನು ಕೊಂಡಾಡಲಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿತ್ತು. ಈ ಮೊತ್ತ ಬೆನ್ನತ್ತುವಾಗ ಆರಂಭದಲ್ಲಿ ಕೊಂಚ ನಿಧಾನಿಯಾದ ಆರ್ ಸಿಬಿ ನಡುವಿನಲ್ಲಿ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಹೀಗಾಗಿ ಆರ್ ಸಿಬಿ ಸೋಲು ಖಚಿತ ಎನ್ನುವ ಸ್ಥಿತಿ ಎದುರಾಗಿತ್ತು. ಈ ಸಂದರ್ಭದಲ್ಲಿ ಕಣಕ್ಕಿಳಿದ ಎಬಿಡಿ ಪಂದ್ಯದ ಚಿತ್ರಣವನ್ನೇ ಬದಲಾಯಿಸಿದರು. ಕೇವಲ 22 ಎಸೆತಗಳಿಂದ 55 ರನ್ ಚಚ್ಚಿದ ಎಬಿಡಿ ಅಸಾಧ‍್ಯವೆನಿಸಿದ್ದ ಗೆಲುವನ್ನು ಸಾಧ‍್ಯವಾಗಿಸಿದರು. ಮೈದಾನದ ಮೂಲೆ ಮೂಲೆಗೂ ಚೆಂಡು ಅಟ್ಟಿದ ಎಬಿಡಿ ಆಟದಿಂದಾಗಿ ಆರ್ ಸಿಬಿ ಎರಡು ಎಸೆತ ಬಾಕಿ ಇರುವಂತೆಯೇ 179 ರನ್ ಗಳಿಸುವ ಮೂಲಕ ಗೆಲುವು ದಾಖಲಿಸಿತು.