Publish Date: Wed, 03 Apr 2019 (09:29 IST)
Updated Date: Wed, 03 Apr 2019 (09:32 IST)
ಜೈಪುರ: ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಮತ್ತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋತಿದೆ. ವಿಶೇಷವೆಂದರೆ ಇದುವರೆಗೆ ಒಂದೂ ಗೆಲುವು ಕಾಣದ ಆರ್ ಸಿಬಿ ನಿನ್ನೆಯಂತೂ ಕನ್ನಡಿಗನಿಂದಲೇ ಸೋತಿದೆ!
ಆ ಕನ್ನಡಿಗ ಆಟಗಾರ ಶ್ರೇಯಸ್ ಗೋಪಾಲ್. ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ ಶ್ರೇಯಸ್ 4 ಓವರ್ ಗಳಲ್ಲಿ ಕೇವಲ 12 ರನ್ ನೀಡಿ 3 ವಿಕೆಟ್ ಕಬಳಿಸಿದರು. ರಣಜಿ ಟ್ರೋಫಿಯಲ್ಲಿ ಕರ್ನಾಟಕ ಪರ ಭರ್ಜರಿ ಆಟವಾಡುವ ಶ್ರೇಯಸ್ ನಿನ್ನೆ ಬೆಂಗಳೂರು ತಂಡವನ್ನೇ ಸೋಲಿಸಿದರು. ಶ್ರೇಯಸ್ ಬೆನ್ನು ಬೆನ್ನಿಗೆ ಎಬಿಡಿ ವಿಲಿಯರ್ಸ್, ಹೆಟ್ ಮೇರ್ ವಿಕೆಟ್ ಕಬಳಿಸಿದ್ದು, ಆರ್ ಸಿಬಿಗೆ ರನ್ ಗಳಿಸಲು ಕಷ್ಟವಾಯಿತು.
ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತ್ತು. ಆರಂಭಿಕ ಪಾರ್ಥಿವ್ ಪಟೇಲ್ 67, ನಾಯಕ ವಿರಾಟ್ ಕೊಹ್ಲಿ 23 ಮತ್ತು ಮೊಯಿನ್ ಅಲಿ ಔಟಾಗದೇ 31 ರನ್ ಗಳಿಸಿದರು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ಎಚ್ಚರಿಕೆಯ ಆಟವಾಡುತ್ತಲೇ 19.5 ಓವರ್ ನಲ್ಲಿ 1`64 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಇದು ರಾಜಸ್ಥಾನಕ್ಕೆ ಈ ಆವೃತ್ತಿಯಲ್ಲಿ ಮೊದಲ ಗೆಲುವಾಗಿದೆ. ರಾಜಸ್ಥಾನ್ ಪರ ಜೋಸ್ ಬಟ್ಲರ್, ಸ್ಟೀವ್ ಸ್ಮಿತ್, ರಾಹುಲ್ ತ್ರಿಪಾಠಿ ಅಜೇಯ 34 ರನ್ ಗಳಿಸಿದರು. ಆರ್ ಸಿಬಿ ಪರ ಯಜುವೇಂದ್ರ ಚಾಹಲ್ 2 ವಿಕೆಟ್ ಕಬಳಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ