ನವದೆಹಲಿ: ಪಹಲ್ಗಾಮ್ ನಲ್ಲಿ ನಡೆದ ಉಗ್ರ ದಾಳಿಯಿಂದಾಗಿ ದೇಶದಾದ್ಯಂತ ಪಾಕಿಸ್ತಾನದ ವಿರುದ್ಧ ಆಕ್ರೋಶದ ಕಟ್ಟೆ ಮೀರಿದೆ. ಇದೇ ಸಂದರ್ಭದಲ್ಲಿ ಭಾರತ-ಪಾಕಿಸ್ತಾನ ನಡುವೆ ಯುದ್ಧ ನಡೆಯಬಹುದು ಎನ್ನಲಾಗುತ್ತಿದೆ. ಯುದ್ಧ ನಡೆದರೆ ಭಾರತಕ್ಕೆ ಎಷ್ಟು ಲಾಸ್, ಏನೆಲ್ಲಾ ತೊಂದರೆ ಅನುಭವಿಸಬೇಕಾಗುತ್ತದೆ ಇಲ್ಲಿದೆ ಒಂದು ನೋಟ.
ನಮ್ಮ ದೇಶದ ಭದ್ರತೆಗೆ, ನಾಗರಿಕರಿಗೆ ಅಪಾಯವಾದಾಗ ಯುದ್ಧ ಅನಿವಾರ್ಯ. ಪಾಕಿಸ್ತಾನದ ವಿಚಾರದಲ್ಲೂ ಭಾರತೀಯರು ಯುದ್ಧವಾಗಲಿ ಎನ್ನುತ್ತಿರುವುದು ಇದೇ ಕಾರಣಕ್ಕೆ. ಎಷ್ಟೇ ಬಾರಿ ಹೇಳಿದರೂ ತಿದ್ದಿಕೊಳ್ಳದ ಪಾಕಿಸ್ತಾನ ಉಗ್ರರನ್ನು ತನ್ನೊಡಲಲ್ಲಿ ಸಾಕಿ ಭಾರತವನ್ನು ಹಾಳು ಮಾಡಲು ಕಳುಹಿಸುತ್ತಲೇ ಇದೆ. ಪಹಲ್ಗಾಮ್ ನಲ್ಲಿ ನಡೆದ ಘಟನೆಯಂತೂ ಅಕ್ಷಮ್ಯ. ಅಮಾಯಕ ಪ್ರವಾಸಿಗರನ್ನು ಕೇವಲ ಧರ್ಮ ನೋಡಿ ಟಾರ್ಗೆಟ್ ಮಾಡಿ ಹತ್ಯೆ ಮಾಡಿದ್ದಾರೆ ಎಂದರೆ ಅದಕ್ಕಿಂತ ಹೇಯ ಕೃತ್ಯ ಮತ್ತೊಂದಿಲ್ಲ.
ಯುದ್ಧ ನಡೆದರೆ ಏನಾಗಬಹುದು?
ಭಾರತೀಯ ಸೇನೆ ಎದುರಾಳಿ ಪಾಕಿಸ್ತಾನವನ್ನು ಮಣ್ಣು ಮುಕ್ಕಿಸುವ ಎಲ್ಲಾ ಸಾಮರ್ಥ್ಯವನ್ನೂ ಹೊಂದಿದೆ. ಆದರೆ ಯುದ್ಧ ನಡೆದರೆ ಈಗಿನಂತೆ ಎಲ್ಲವೂ ಸುಲಭವಲ್ಲ. ಯುದ್ಧ ಎನ್ನುವುದು ಒಂದು ದೇಶದ ಆರ್ಥಿಕತೆ ಮೇಲೆ ಬಹುವಾಗಿ ಪರಿಣಾಮ ಬೀರುತ್ತದೆ.
ದೇಶದಲ್ಲಿ ಚುನಾವಣೆ, ನಾಯಕತ್ವ ಬದಲಾವಣೆ ಅಥವಾ ಯಾವುದೇ ಪ್ರಾಕೃತಿಕ ವಿಕೋಪಗಳಾದಾಗಲೇ ಷೇರು ಮಾರುಕಟ್ಟೆ ಅಲ್ಲೋಲಕಲ್ಲೋಲವಾಗುತ್ತದೆ. ಇನ್ನು ಯುದ್ಧವೇ ನಡೆದರೆ ಕೇಳುವುದೇ ಬೇಡ. ಷೇರು ಮಾರುಕಟ್ಟೆ ಪಾತಾಳ ತಲುಪುತ್ತದೆ.
ಇದರ ಜೊತೆಗೆ ವ್ಯಾಪಾರ-ವಹಿವಾಟಿಗೂ ತೊಂದರೆಯಾಗಲಿದೆ. ವಿದೇಶೀ ಒಪ್ಪಂದಗಳು, ವ್ಯವಹಾರಗಳು ಸ್ಥಗಿತವಾಗಬಹುದು. ಸರಕು ಸಾಗಣೆಗೆ ಅಡ್ಡಿಯಾಗುವುದರಿಂದ ಸಾಕಷ್ಟು ನಷ್ಟ ಅನುಭವಿಸಬೇಕಾಗುತ್ತದೆ.
ಯುದ್ಧದ ಸಂದರ್ಭದಲ್ಲಿ ದೇಶದ ಆರ್ಥಿಕತೆಯ ಬಹುಪಾಲು ಹಣ ಮಿಲಿಟರಿಗೆ ಮೀಸಲಿಡಬೇಕಾಗುತ್ತದೆ. ಆಗ ಉಳಿದ ಕಾರ್ಯನಿರ್ವಹಣೆಗೆ, ಅಭಿವೃದ್ಧಿ ಕಾರ್ಯಗಳಿಗೆ ಹಣ ಸಿಗದೇ ಹೋಗಬಹುದು. ಇದರಿಂದ ದೇಶದ ಅಭಿವೃದ್ಧಿ 10 ವರ್ಷದಷ್ಟು ಹಿಂದೆ ಹೋಗಲಿದೆ. ಹಣದುಬ್ಬರ, ಸಾಲ ಪ್ರಮಾಣ ಹೆಚ್ಚಾಗಲಿದೆ. ಇದರಿಂದಾಗಿ ಜನಜೀವನಕ್ಕೆ ಅಗತ್ಯವಾದ ವಸ್ತುಗಳ ಬೆಲೆ ಏರಿಕೆಯಾಗಬಹುದು.
ಇದರ ಜೊತೆಗೆ ಪ್ರಾಣ ಹಾನಿ ಬಗ್ಗೆ ಪ್ರತ್ಯೇಕವಾಗಿ ಹೇಳುವುದು ಬೇಡ. ಇದೆಲ್ಲಾ ಕಾರಣಕ್ಕೇ ಯುದ್ಧ ಮಾಡುವಾಗ ಒಂದು ರಾಷ್ಟ್ರ ಇದೆಲ್ಲವನ್ನೂ ಯೋಚಿಸಿಯೇ ಹೆಜ್ಜೆಯಿಡಬೇಕಾಗುತ್ತದೆ.