Select Your Language

Notifications

webdunia
webdunia
webdunia
webdunia

ರೂಪಾಂತರಿ ಭಯ; ಚೀನಾ ಸೇರಿ 7 ದೇಶಗಳ ಪ್ರಯಾಣಿಕರ ಭಾರತ ಪ್ರವೇಶಕ್ಕೆ RT-PCR ಪರೀಕ್ಷೆ ಕಡ್ಡಾಯ

ರೂಪಾಂತರಿ ಭಯ; ಚೀನಾ ಸೇರಿ 7 ದೇಶಗಳ ಪ್ರಯಾಣಿಕರ ಭಾರತ ಪ್ರವೇಶಕ್ಕೆ RT-PCR ಪರೀಕ್ಷೆ ಕಡ್ಡಾಯ
ನವದೆಹಲಿ , ಶುಕ್ರವಾರ, 3 ಸೆಪ್ಟಂಬರ್ 2021 (07:35 IST)
ನವ ದೆಹಲಿ (ಸೆ,03) : ಮಾರಣಾಂತಿಕ ಕೊರೋನಾ ವೈರಸ್ ಕಾಟ ಇನ್ನೂ ಭಾರತಕ್ಕೆ ತಪ್ಪಿಲ್ಲ. ದೇಶದಲ್ಲಿ ಎಲ್ಲರಿಗೂ ಉಚಿತ ಲಸಿಕೆಯನ್ನು ಕೇಂದ್ರ ಸರ್ಕಾರ ಘೋಷಿಸಿದ್ದರೂ ಸಹ ಕೊರೋನಾಗೆ ತುತ್ತಾಗುತ್ತಿರುವವರ ಸಂಖ್ಯೆ ಮಾತ್ರ ಕಡಿಮೆ ಯಾಗುತ್ತಿಲ್ಲ. ಇನ್ನೂ ಸಾವಿನ ಸಂಖ್ಯೆಯೂ ಅಧಿಕವಾಗಿರುವುದು ಕಳವಳಕಾರಿ ಯಾಗಿದೆ.

ಈ ನಡುವೆ ಯೂರೋಪ್ ಸೇರಿದಂತೆ ಅನೇಕ ದೇಶಗಳಲ್ಲಿ ಕೊರೋನಾ ಮೂರನೇ ಅಲೆ ಆರಂಭವಾಗಿದೆ. ಅಲ್ಲದೆ, ಕೊರೋನಾ ವೈರಸ್ ಮತ್ತೆ ರೂಪಾಂತರ ಗೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಭಾರತ ವಿಮಾನ ಯಾನ ಸಚಿವಾಲಯ ಈಗಾಗಲೇ ಯೂರೋಪ್-ಮಧ್ಯಪ್ರಾಚ್ಯ ಸೇರಿದಂತೆ ಹಲವು ದೇಶಗಳ ಪ್ರಯಾಣಿಕರ ಭಾರತ ಪ್ರವೇಶಕ್ಕೆ RT-PCR ಪರೀಕ್ಷೆಯನ್ನು ಕಡ್ಡಾಯಗೊಳಿಸಿತ್ತು. ಆದರೆ, ಇದೀಗ ಚೀನಾ-ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ಬೋಟ್ಸ್ವಾನ, ಮಾರಿಷಸ್, ನ್ಯೂಜಿಲ್ಯಾಂಡ್, ಜಿಂಬಾಬ್ವೆ  ಸೇರಿದಂತೆ ಮತ್ತೆ 7 ದೇಶಗಳ ಭಾರತ ಪ್ರವೇಶಕ್ಕೆ ಕೇಂದ್ರ ಸರ್ಕಾರ ಇದೇ ನಿಯಮವನ್ನು ಜಾರಿಗೊಳಿಸಿದೆ.
ಈ ಮೇಲ್ಕಂಡ ದೇಶಗಳಿಂದ ಭಾರತಕ್ಕೆ ಪ್ರವೇಶ ಭಯಸುವ ಪ್ರವಾಸಿಗಳು 72 ಗಂಟೆಯ ಒಳಗೆ ಪರೀಕ್ಷೆ ನಡೆಸಲಾಗಿರುವ RT-PCR ದಾಖಲಾತಿ ಪ್ರತಿಗಳು ಇದ್ದರೆ ಮಾತ್ರ ಭಾರತಕ್ಕೆ ಪ್ರವೇಶ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಸಾಂಕ್ರಾಮಿಕ ಕೊರೋನಾ ವೈರಸ್ ಹೊಸ ರೂಪಾಂತರ ಪತ್ತೆಯಾಗಿರುವ ಕಾರಣದಿಂದಾಗಿ ದೇಶದಲ್ಲಿ ಮತ್ತೆ ಕೊರೋನಾ ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ಈ ಕ್ರಮ ಅನಿವಾರ್ಯ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೊಸ ರೂಪಾಂತರ ಕೊರೋನಾ ವೈರಸ್ ಅನ್ನು ಮೊದಲು ಮೇನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಪತ್ತೆ ಮಾಡಲಾಯಿತು. ಇದು ನಂತರ ಚೀನಾ, ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ, ಮಾರಿಷಸ್, ಇಂಗ್ಲೆಂಡ್, ನ್ಯೂಜಿಲ್ಯಾಂಡ್, ಪೋರ್ಚುಗಲ್ ಮತ್ತು ಸ್ವಿಟ್ಜರ್ಲ್ಯಾಂಡ್ನಲ್ಲೂ ಸಹ ಇದೇ ರೀತಿಯ ರೂಪಾಂತರಿ ಕಂಡುಬಂದಿದೆ. ಹೀಗಾಗಿ ಭಾರತ ಈ ದೇಶಗಳ ವಿಮಾನಗಳಿಗೆ ನಿರ್ಬಂಧ ಹೇರಿತ್ತು.
ಹೊಸ ಮಾರ್ಗಸೂಚಿಗಳ ಪ್ರಕಾರ, ಲಕ್ಷಣರಹಿತ ಪ್ರಯಾಣಿಕರಿಗೆ ಮಾತ್ರ ಭಾರತಕ್ಕೆ ವಿಮಾನ ಹತ್ತಲು ಅವಕಾಶವಿದೆ ಮತ್ತು ಬಂದ ನಂತರ, ಅವರನ್ನು ಮತ್ತೆ ಆರ್ಟಿ-ಪಿಸಿಆರ್ ಪರೀಕ್ಷೆಯ ಮೂಲಕ ಕೋವಿಡ್ಗಾಗಿ ಪರೀಕ್ಷಿಸಲಾಗುತ್ತದೆ. ಅಂತರರಾಷ್ಟ್ರೀಯ ಪ್ರಯಾಣಿಕರಲ್ಲಿ ಜೀನೋಮ್ ಕಣ್ಗಾವಲುಗಾಗಿ ಸಕಾರಾತ್ಮಕ ಪ್ರಕರಣಗಳ ನಿರ್ದಿಷ್ಟ ಶೇಕಡಾವಾರು ಮಾದರಿಗಳನ್ನು ಕಳುಹಿಸಲು ಸಚಿವಾಲಯವು ಎಲ್ಲಾ ರಾಜ್ಯಗಳನ್ನು ಕೇಳಿದೆ.
ಈ ಹಿಂದೆ, ಮುಂಬೈನ ನಾಗರಿಕ ಸಂಸ್ಥೆ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಸೆಪ್ಟೆಂಬರ್ 3 ರಿಂದ ನಗರದ ವಿಮಾನ ನಿಲ್ದಾಣಕ್ಕೆ ಆಗಮಿಸುವ ಅಂತರಾಷ್ಟ್ರೀಯ ಪ್ರಯಾಣಿಕರಿಗೆ RT-PCR ಪರೀಕ್ಷೆಗಳನ್ನು ಕಡ್ಡಾಯಗೊಳಿಸಿತ್ತು.
2019ರಲ್ಲಿ ಮೊದಲ ಬಾರಿಗೆ ಚೀನಾದ ವುಹಾನ್ ನಗರದಲ್ಲಿ ಪತ್ತೆಯಾದ ಈ ಮಾರಣಾಂತಿಕ ಕೊರೋನಾ ವೈರಸ್ ಕಳೆದ ಎರಡು ವರ್ಷಗಳ ಅವಧಿಯಲ್ಲಿ 44 ರಿಂದ 59 ಭಾರಿ ರೂಪಾಂತರ ಹೊಂದಿತ್ತು ಎಂದು ತಜ್ಞರು ಅಂದಾಜಿಸಿದ್ದಾರೆ. ಈಗ ರೂಪಾಂತರಗೊಂಡಿರುವ ವೈರಸ್ ಮೊದಲು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿತ್ತು. ಆದರೆ, ಈ ಹೊಸ ರೂಪಾಂತರಿಯ ಯಾವುದೇ ಪ್ರಕರಣಗಳು ಭಾರತದಲ್ಲಿ ಈವರೆಗೆ ಪತ್ತೆಯಾಗಿಲ್ಲ ಎನ್ನಲಾಗುತ್ತಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಎಸ್‌ಸಿ/ಎಸ್‌ಟಿ ಸುಳ್ಳು ಜಾತಿ ಪ್ರಮಾಣ ಪತ್ರ ನೀಡುವರಿಗೆ ಶಾಕ್!