ನವದೆಹಲಿ: ಎಲ್ಲರ ಬಾಸ್ ಎಂದು ಹೇಳಿಕೊಳ್ಳುವವರಿಗೆ ನಮ್ಮ ಏಳಿಗೆ ಕಂಡರೆ ಹೊಟ್ಟೆ ಉರಿಯಾಗುತ್ತಿದೆ. ಭಾರತದ ಆರ್ಥಿಕತೆ ವಿಶ್ವದಲ್ಲೇ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಮೆರಿಕಾಗೆ ಟಾಂಗ್ ಕೊಟ್ಟಿದ್ದಾರೆ.
ಭಾರತದ ಆರ್ಥಿಕತೆ ಸತ್ತ ಆರ್ಥಿಕತೆ ಎಂದು ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಜರೆದಿದ್ದರು. ರಷ್ಯಾ ಜೊತೆಗೆ ಭಾರತದ ವ್ಯವಹಾರದಿಂದ ಹೊಟ್ಟೆ ಉರಿದುಕೊಂಡಿರುವ ಟ್ರಂಪ್ ಭಾರತದ ಸರಕುಗಳ ಮೇಲೆ ಶೇ.50 ರಷ್ಟು ಸುಂಕ ವಿಧಿಸಿ ಸೇಡು ತೀರಿಸಿಕೊಂಡಿದ್ದಾರೆ.
ಇದರ ವಿರುದ್ಧ ಭಾರತ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಮಧ್ಯಪ್ರದೇಶದ ಕಾರ್ಯಕ್ರಮವೊಂದರಲ್ಲಿ ಭಾಗಿಯಾದ ರಾಜನಾಥ್ ಸಿಂಗ್ ಅಮೆರಿಕಾದ ಹೆಸರು ನೇರವಾಗಿ ಹೇಳದೇ ಖಡಕ್ ಕೌಂಟರ್ ಕೊಟ್ಟಿದ್ದಾರೆ.
ಕೆಲವು ರಾಷ್ಟ್ರಗಳು ಎಲ್ಲ ಬಾಸ್ ಎಂದು ಅವರನ್ನೇ ಕರೆದುಕೊಳ್ಳುತ್ತವೆ. ಆದರೆ ಇಂತಹ ರಾಷ್ಟ್ರಕ್ಕೆ ಭಾರತದ ಪ್ರಗತಿಯನ್ನು ಸಹಿಸಲು ಆಗುತ್ತಿಲ್ಲ. ಹೀಗಾಗಿಯೇ ಭಾರತದ ಉತ್ಪನ್ನಗಳಿಗೆ ವಿದೇಶಗಳಲ್ಲಿ ಬೆಲೆ ಹೆಚ್ಚಳವಾಗುವಂತೆ ಮಾಡಲಾಗುತ್ತಿದೆ. ಇಂತಹ ಪ್ರಯತ್ನಗಳೆಲ್ಲಾ ಪ್ರಯೋಜನವಾಗಲ್ಲ. ಭಾರತ ವಿಶ್ವದ ಪ್ರಬಲ ಆರ್ಥಿಕತೆ ಹೊಂದಿರುವ ರಾಷ್ಟ್ರಗಳ ಸಾಲಿನಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ. ಹಿಂದೆ ವಿದೇಶದಿಂದ ಶಸ್ತ್ರಾಸ್ತ್ರ ಖರೀದಿಸುತ್ತಿದ್ದ ರಾಜನಾಥ್ ಸಿಂಗ್ ಈಗ ಸ್ವತಃ ಶಸ್ತ್ರಾಸ್ತ್ರ ತಯಾರು ಮಾಡುವಷ್ಟು ಸಮರ್ಥವಾಗಿದೆ ಎಂದಿದ್ದಾರೆ.