ನವದೆಹಲಿ: ಗಯಾನಗೆ ಐತಿಹಾಸಿಕ ಭೇಟಿ ನೀಡಿರುವ ಪ್ರಧಾನಿ ಮೋದಿಗೆ ಅಲ್ಲಿನ ಅತ್ಯುನ್ನತ ನಾಗರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಗಯಾನದ ಆರ್ಡರ್ ಆಫ್ ಎಕ್ಸಲೆನ್ಸ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
56 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಗಯಾನಗೆ ಭೇಟಿ ನೀಡಿದ ಪ್ರಧಾನಿ ಮೋದಿಗೆ ಆ ದೇಶದ ಅತ್ಯುನ್ನತ ಗೌರವ ನೀಡಲಾಗಿದೆ. ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಈ ಉನ್ನತ ಪ್ರಶಸ್ತಿಯನ್ನು ನೀಡಿದ್ದಕ್ಕಾಗಿ ನನ್ನ ಸ್ನೇಹಿತ ಇರ್ಫಾನ್ ಅಲಿ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದಿದ್ದಾರೆ.
ಈ ಗೌರವ ಭಾರತದ 140 ಕೋಟಿ ಜನರಿಗೆ ಸಂದಿರುವ ಗೌರವ. ನಮ್ಮ ಸಂಬಂಧದ ಆಳಕ್ಕೆ ಈ ಗೌರವ ಸಾಕ್ಷಿಯಾಗಿದೆ. ಇದು ನಮಗೆ ಇನ್ನಷ್ಟು ಸ್ಪೂರ್ತಿಯಾಗಿರುತ್ತದೆ ಎಂದು ಮೋದಿ ಹೇಳಿದ್ದಾರೆ. ಭಾರತ ಮತ್ತು ಗಯಾನ ನಡುವೆ ಸಾಕಷ್ಟು ಸಾಮ್ಯತೆಗಳಿವೆ ಎಂದು ಮೋದಿ ಈ ಸಂದರ್ಭದಲ್ಲಿ ಹೇಳಿದ್ದಾರೆ.
ಈ ಹಿಂದೆ ಮೋದಿಗೆ ಡೊಮಿನಿಕಾದ ಅತ್ಯುನ್ನತ ನಾಗರಿಕ ಪ್ರಶಸ್ತಿ ಸಿಕ್ಕಿತ್ತು. ಇದಕ್ಕೆ ಮೊದಲು ರಷ್ಯಾ ಪ್ರವಾಸ ಮಾಡಿದ್ದಾಗ ಅಲ್ಲಿನ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ರಷ್ಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ದಿ ಅಪೊಸ್ತಲ್ ನೀಡಿ ಗೌರವಿಸಿದ್ದರು.