ಕೀವ್ : ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಸಾಮಾಜಿಕ ಜಾಲತಾಣದಲ್ಲಿ ತಾವಿರುವ ಸ್ಥಳದ ವಿಳಾಸವನ್ನು ಹಂಚಿಕೊಂಡು ನಾನು ಅಡಗಿಕೊಂಡಿಲ್ಲ, ಯಾರಿಗೂ ಹೆದರುವುದಿಲ್ಲ ಎಂದು ರಷ್ಯಾಗೆ ತಿರುಗೇಟು ನೀಡಿದ್ದಾರೆ.
ನಾನು ಬ್ಯಾಂಕೋವಾನಲ್ಲಿರುವ ಕೀವ್ನಲ್ಲಿದ್ದು, ನಾನು ಅಡಗಿಕೊಂಡಿಲ್ಲ, ಯಾರಿಗೂ ಹೆದರುವುದಿಲ್ಲ. ಎನೇ ಆಗಲಿ ನಮ್ಮ ಈ ದೇಶಭಕ್ತಿಯ ಯುದ್ಧ ಗೆದ್ದೇ ಗೆಲ್ಲುತ್ತೇವೆ ಎಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೆಲ ಸಾಲುಗಳನ್ನು ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ.
ಫೆಬ್ರವರಿ 24 ರಂದು ರಷ್ಯಾದ ಅಧ್ಯಕ್ಷ ಪುಟಿನ್ ಯುದ್ಧ ಘೋಷಿಸಿದಾಗಿನಿಂದ, ಉಕ್ರೇನಿಯನ್ ನಾಯಕ ರಷ್ಯಾದ ಹಂತಕರ ಮೂರು ಪ್ರಯತ್ನಗಳಿಂದ ಬದುಕುಳಿದಿದ್ದಾರೆ ಎಂದು ಹೇಳಿದರು.
ವೀಡಿಯೋದಲ್ಲಿ ಉಕ್ರೇನಿಯನ್ ಧ್ವಜದಿಂದ ಸುತ್ತುವರೆದಿರುವ ತಮ್ಮ ಮೇಜಿನ ಬಳಿ ಕುಳಿತುಕೊಂಡು ಮಾತನಾಡಿದ ಅವರು, ಇಂದು ರಷ್ಯಾದ ವಿರುದ್ಧದ ನಮ್ಮ ಹೋರಾಟ ನಡೆಯುತ್ತಿರುವುದು ಹನ್ನೆರಡನೇ ದಿನವಾಗಿದೆ. ನಾವೆಲ್ಲರೂ ಈಗ ಯುದ್ಧ ಭೂಮಿಯಲ್ಲಿ ಇದ್ದೇವೆ. ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ. ಈಗಾಗಲೇ ನಾನು ರಾಜಧಾನಿ ಕೀವ್ನಲ್ಲಿದ್ದು, ನನ್ನ ತಂಡವು ನನ್ನೊಂದಿಗಿದೆ ಎಂದು ಹೇಳಿದರು.