ವಾಷಿಂಗ್ಟನ್ : ಸ್ಟ್ರೀಮಿಂಗ್ ದೈತ್ಯ ನೆಟ್ಫ್ಲಿಕ್ಸ್ 2023ರ ಆರಂಭದಿಂದ ಪಾಸ್ವರ್ಡ್ ಹಂಚಿಕೆ ಫೀಚರ್ ಅನ್ನು ಕೊನೆಗೊಳಿಸಲು ಯೋಜಿಸುತ್ತಿರುವುದಾಗಿ ವರದಿಯಾಗಿದೆ.
ಹೌದು, ಕಂಪನಿ ಈ ಹಿಂದೆ ಕಳೆದ ಹಲವು ತಿಂಗಳುಗಳಿಂದಲೇ ಪಾಸ್ವರ್ಡ್ ಹಂಚಿಕೆ ಫೀಚರ್ ಅನ್ನು ಸ್ಥಗಿತಗೊಳಿಸುವ ಬಗ್ಗೆ ಆಗಾಗ ಸುದ್ದಿಯಾಗುತ್ತಿತ್ತು. ಆದರೆ ಇದೀಗ ನೆಟ್ಫ್ಲಿಕ್ಸ್ ಕೊನೆಗೂ ಈ ಬದಲಾವಣೆಯನ್ನು ಅಧಿಕೃತವಾಗಿ ಮುಂದಿನ ವರ್ಷದಿಂದ ಜಾರಿಗೆ ತರಲು ಯೋಜಿಸಿರುವುದಾಗಿ ವರದಿಯಾಗಿದೆ.
ಪಾಸ್ವರ್ಡ್ ಹಂಚಿಕೆ ಫೀಚರ್ ಕಂಪನಿಯ ಗಳಿಕೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿರುವುದಾಗಿ ನೆಟ್ಫ್ಲಿಕ್ಸ್ ಹಿಂದಿನಿಂದಲೂ ಹೇಳಿಕೊಂಡು ಬಂದಿತ್ತು. ಆದರೆ 2022ರಲ್ಲಿ ಚಂದಾದಾರರ ಹೆಚ್ಚಳದಿಂದಾಗಿ ಕಂಪನಿ ತನ್ನ ಸಮಸ್ಯೆ ತೋರಿಸಿಕೊಳ್ಳುವುದನ್ನು ಕಡಿಮೆ ಮಾಡಿತ್ತು.
ಈ ವರ್ಷ ನೆಟ್ಫ್ಲಿಕ್ಸ್ ಆದಾಯದ ಕುಸಿತ ಹಾಗೂ 10 ವರ್ಷಗಳಲ್ಲೇ ಮೊದಲ ಬಾರಿ ಚಂದಾದಾರರ ನಷ್ಟವನ್ನು ಎದುರಿಸಿದೆ. ಹೀಗಾಗಿ ಕಂಪನಿಯ ಸಿಇಒ ರೀಡ್ ಹೇಸ್ಟಿಂಗ್ಸ್ ಈ ಸಮಸ್ಯೆಗೆ ಇದೀಗ ಕ್ರಮ ತೆಗೆದುಕೊಳ್ಳಲು ಸೂಕ್ತ ಸಮಯವಾಗಿದೆ ಎಂದು ಹೇಳಿದ್ದಾರೆ.