ವಾಷಿಂಗ್ಟನ್ : ಡೇಂಜರಸ್ ಫಾರೆಸ್ಟ್ನಂತಹ ಸಿನಿಮಾಗಳಲ್ಲಿ ವಿವಿಧ ರೀತಿಯ ಕೀಟಗಳು ಮನುಷ್ಯನನ್ನು ಭೀಕರವಾಗಿ ತಿಂದು ಹತ್ಯೆ ಮಾಡುತ್ತವೆ. ಹಾಗೆಯೇ ಸಿನಿಮೀಯ ಮಾದರಿಯಲ್ಲಿ ಕೀಟಗಳು ಮತ್ತು ತಿಗಣೆ ಕೈದಿಯೊಬ್ಬನನ್ನ ಜೀವಂತವಾಗಿ ತಿಂದುಹಾಕಿರುವ ಭಯಾನಕ ಘಟನೆ ನಡೆದಿದೆ.
ಅಮೆರಿಕದ ಅಟ್ಲಾಂಟಾದ ಜೈಲಿನಲ್ಲಿದ್ದ 35 ವರ್ಷದ ಕೈದಿಯೊಬ್ಬನನ್ನು ಕೀಟಗಳು ಮತ್ತು ತಿಗಣೆ ತಿಂದು ಹಾಕಿವೆ ಎಂದು ಸಂತ್ರಸ್ತರ ಕುಟುಂಬದ ವಕೀಲರು ಆರೋಪಿಸಿದ್ದಾರೆ.
ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಮೃತ ವ್ಯಕ್ತಿಯ ಕುಟುಂಬವು ಈಗ ಅವರ ಸಾವಿನ ಬಗ್ಗೆ ಕ್ರಿಮಿನಲ್ ತನಿಖೆಗೆ ಒತ್ತಾಯಿಸಿದ್ದು, ಜೈಲನ್ನು ಮುಚ್ಚಬೇಕು ಮತ್ತು ಅಲ್ಲಿನ ಕೈದಿಗಳನ್ನ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದೆ.
ಯುಎಸ್ ಪೊಲೀಸರ ಪ್ರಕಾರ, 2022ರ ಜೂನ್ 12 ರಂದು ಲಾಶಾನ್ ಥಾಂಪ್ಸನ್ ಎಂಬ ವ್ಯಕ್ತಿಯನ್ನ ಅಟ್ಲಾಂಟಾದಲ್ಲಿ ಬಂಧಿಸಿ, ಫುಲ್ಟನ್ ಕೌಂಟಿ ಜೈಲಿಗೆ ಕರೆದೊಯ್ಯಲಾಗಿತ್ತು. ಆದರೆ ವಿಚಾರಣೆಯ ನಂತರ ಆತನನ್ನ ಮಾನಸಿಕ ಅಸ್ವಸ್ಥ ಎಂದು ಪರಿಗಣಿಸಿ ಮನೋವೈದ್ಯಕೀಯ ವಿಭಾಗದಲ್ಲಿರಿಸಲಾಗಿತ್ತು. ಈ ನಡುವೆ ಪೊಲೀಸರು ಸಿಆರ್ಪಿಸಿ ಅನ್ವಯ ತನಿಖೆ ಪ್ರಕ್ರಿಯೆ ಆರಂಭಿಸಿದ್ದರು. ಆತನ ಹೇಳಿಕೆ ಪಡೆಯಲು 2022ರ ಸೆಪ್ಟೆಂಬರ್ 13ರಂದು ಹೋದಾಗ ಥಾಂಪ್ಸನ್ ಪ್ರತಿಕ್ರಿಯಿಸಲಿಲ್ಲ. ಅದಾದ 3 ತಿಂಗಳ ನಂತರ ಆತ ಕೊಠಡಿಯಲ್ಲೇ ಮೃತಪಟ್ಟಿರುವುದು ಕಂಡುಬಂದಿತು.
ಈ ಕುರಿತು ಪ್ರತಿಕ್ರಿಯಿಸಿರುವ ಸಂತ್ರಸ್ತ ಕುಟುಂಬ ಪರ ವಕೀಲರು, ಥಾಂಪ್ಸನ್ ಅವರನ್ನ ಕೊಳಕು ತುಂಬಿದ ಕೋಣೆಯಲ್ಲಿ ಇರಿಸಲಾಗಿತ್ತು. ಹಾಗಾಗಿ ತಾನು ಮಲಗುತ್ತಿದ್ದ ಹಾಸಿಗೆಯಲ್ಲಿ ಕೀಟಗಳು ಹೆಚ್ಚಾಗಿ, ಮೂರು ತಿಂಗಳ ನಂತರ ಕೀಟಗಳಿಂದ ಜೀವಂತವಾಗಿ ತಿನ್ನಲ್ಪಟ್ಟಿದ್ದಾರೆ. ಇದಕ್ಕೆ ಯಾರು ಹೊಣೆಗಾರರು ಎಂದು ಪ್ರಶ್ನಿಸಿದ್ದಾರೆ.