ನವದೆಹಲಿ: ಭಾರತಕ್ಕೆ ದುಬಾರಿ ಸುಂಕ ವಿಧಿಸಿ ಸತ್ತ ಎಕಾನಮಿ ಎಂದು ನಿಂದಿಸಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ತಕ್ಕ ಪಾಠ ಕಲಿಸಲು ಭಾರತ ಮುಂದಾಗಿದೆ.
ನನ್ನ ಸ್ನೇಹಿತ ಎನ್ನುತ್ತಲೇ ಭಾರತದ ಮೇಲೆ ಶೇ.25 ರಷ್ಟು ಸುಂಕ ವಿಧಿಸಿದ್ದಲ್ಲದೇ ರಷ್ಯಾ ಜೊತೆಗಿನ ಸಂಬಂಧಕ್ಕೆ ಕಿಡಿ ಕಾರಿರುವ ಡೊನಾಲ್ಡ್ ಟ್ರಂಪ್ ಭಾರತದ ಆರ್ಥಿಕತೆ ಸತ್ತ ಆರ್ಥಿಕತೆ ಎಂದಿದ್ದರು. ಅದು ನಶಿಸಿ ಹೋಗುವ ಆರ್ಥಿಕತೆ ಎಂದು ಜರೆದಿದ್ದರು.
ಟ್ರಂಪ್ ಮಾತುಗಳು ಭಾರತವನ್ನು ಕೆರಳಿಸಿದೆ. ಈ ಕಾರಣಕ್ಕೆ ಭಾರತ ಸದ್ದಿಲ್ಲದೇ ತಿರುಗೇಟು ನೀಡಲು ಮುಂದಾಗಿದೆ. ಅಮೆರಿಕಾ ಜೊತೆಗಿನ ಎಫ್-35 ಫೈಟರ್ ಜೆಟ್ ಡೀಲ್ ಮಾಡಿಕೊಳ್ಳದೇ ಇರಲು ಭಾರತ ತೀರ್ಮಾನಿಸಿದೆ. ಇದು ಅಮೆರಿಕಾಗೆ ತೀವ್ರ ಹೊಡೆತ ನೀಡಲಿದೆ.
ಭಾರತವು ಯುದ್ಧ ಪರಿಕರಗಳ ನಿರ್ಮಾಣ ವಿಚಾರದಲ್ಲಿ ಸ್ವಾವಲಂಬನೆಯ ಗುರಿ ಹೊಂದಿದೆ. ಎಫ್ 35 ಫೈಟರ್ ಜೆಟ್ ನಿರ್ಮಾಣ ಮಾಡುವ ಅಮೆರಿಕಾದ ಮಾರ್ಟಿನ್ ಕಂಪನಿ ಭಾರತದ ಸಹಯೋಗ ಪಡೆಯುತ್ತಿಲ್ಲ. ಹೀಗಾಗಿ ಎಫ್ 35 ಖರೀದಿಸುವ ಆಸಕ್ತಿ ಇಲ್ಲ ಎಂದು ಭಾರತ ಹೇಳಿದೆ. ಭಾರತ ಈಗ ತಾನೇ ಸ್ವಯಂ ಈ ಶಕ್ತಿಶಾಲೀ ಫೈಟರ್ ಜೆಟ್ ತಯಾರಿಸುವ ಯೋಜನೆ ಹೊಂದಿದೆ. ಇದೇ ನೆಪದಲ್ಲಿ ಅಮೆರಿಕಾದಿಂದ ಖರೀದಿಸಲು ನಿರಾಸಕ್ತಿ ತೋರಿದೆ. ಈ ಮೂಲಕ ಭಾರತದ ಮೇಲೆ ದುಬಾರಿ ಸುಂಕ ವಿಧಿಸಿ ಆರ್ಥಿಕತೆಯನ್ನು ನಿಂದಿಸಿದ ಅಮೆರಿಕಾಗೆ ತಿರುಗೇಟು ನೀಡಿದಂತಾಗಿದೆ.