ಈಗ ನಡೆಯುತ್ತಿರುವ ಟೋಕಿಯೋ ಒಲಿಂಪಿಕ್ಸ್ (Tokyo Olympics) ಇಂದು ಮೂರನೇ ದಿನಕ್ಕೆ ಅಡಿ ಇಟ್ಟಿದೆ. 49 ಕಿಲೋ ವಿಭಾಗದ ಮಹಿಳಾ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಪಡೆದು ಹೊಸ ದಾಖಲೆ ಬರೆದಿದ್ದಾರೆ.
ಒಲಿಂಪಿಕ್ಸ್ನಲ್ಲಿ ಬೆಳ್ಳಿ ಗೆದ್ದ ಮೊದಲ ಭಾರತೀಯ ವೇಟ್ಲಿಫ್ಟರ್ ಎನಿಸಿದ್ದಾರೆ. ಅದು ಬಿಟ್ಟರೆ ಭಾರತಕ್ಕೆ ಮೊದಲ ಎರಡು ದಿನ ತುಸು ನಿರಾಸೆ ಕೂಡ ತಂದಿದೆ. ಪದಕ ಗೆಲ್ಲಬಲ್ಲಂಥವರು ಎಡವಿದ್ದಾರೆ. ಭಾರತ ಈ ಬಾರಿಯ ಒಲಿಂಪಿಕ್ಸ್ಗೆ 120 ಆಟಗಾರರನ್ನ ಕಳುಹಿಸಿದೆ. ಇದರಲ್ಲಿ ಹಾಕಿಯ ಎರಡು ತಂಡಗಳಿಂದ 32 ಆಟಗಾರರೂ ಒಳಗೊಂಡಿದ್ಧಾರೆ. ಒಲಿಂಪಿಕ್ಸ್ ಇತಿಹಾಸದಲ್ಲಿ ಅತಿ ಹೆಚ್ಚು ಭಾರತೀಯರು ಸ್ಪರ್ಧಿಸಿರುವುದು ಇದೇ ಮೊದಲು. ಇದೇ ಹೊತ್ತಿನಲ್ಲಿ ಭಾರತದಿಂದ ಹೆಚ್ಚು ಪದಕಗಳ ನಿರೀಕ್ಷೆ ಕೂಡ ಹೆಚ್ಚಿದೆ. 2012ರಲ್ಲಿ ಗಳಿಸಿದ್ದ 6 ಪದಕಗಳ ಸಂಖ್ಯೆಯನ್ನ ಭಾರತೀಯರು ಈ ಬಾರಿ ದಾಟಲಿದ್ಧಾರಾ ಎಂಬ ಕುತೂಹಲವಂತೂ ಇದೆ. 2012ರ ಒಲಿಂಪಿಕ್ಸ್ ಬಿಟ್ಟರೆ ಬೇರಿನ್ನಾವ ಒಲಿಂಪಿಕ್ ಕ್ರೀಡಾಕೂಟದಲ್ಲೂ ಭಾರತ 3ಕ್ಕಿಂತ ಹೆಚ್ಚು ಪದಕ ಗಳಿಸಿದ್ದಿಲ್ಲ. 2008ರಲ್ಲಿ 1 ಚಿನ್ನ ಹಾಗೂ 2 ಬೆಳ್ಳಿ ಗೆದ್ದದ್ದೇ ಭಾರತದ ಗರಿಷ್ಠ ಸಾಧನೆ. ಈ ಬಾರಿ ಭಾರತೀಯರು ಎಷ್ಟು ಪದಕ ಗೆಲ್ಲಬಲ್ಲರು? ಇಲ್ಲಿದೆ ಒಂದು ಅವಲೋಕನ.
ಆರ್ಚರಿ (ಬಿಲ್ಲುಗಾರಿಕೆ ): ಈ ಕ್ರೀಡೆಯಲ್ಲಿ ಭಾರತಕ್ಕೆ 1-2 ಪದಕಗಳ ನಿರೀಕ್ಷೆ ಇದೆ. ಇಲ್ಲಿ ಭಾರತದ ಪ್ರತಿಭಾನ್ವಿತ ನಾಲ್ವರ ತಂಡವಿದೆ. ಮೂವರು ಪುರುಷರು ಮತ್ತು ಒಬ್ಬ ಮಹಿಳೆ. ದೀಪಿಕಾ ಕುಮಾರಿ ಚಿನ್ನದ ಪದಕ ಗೆಲ್ಲುವ ನಿರೀಕ್ಷೆ ಇರುವ ಬಿಲ್ಲುಗಾರ್ತಿ. ಆದರೆ, ಮಿಕ್ಸೆಡ್ ವಿಭಾಗದಲ್ಲಿ ದೀಪಿಕಾ ಕುಮಾರಿ ಮತ್ತು ಪ್ರವೀಣ್ ಜಾಧವ್ ಅವರು ಕ್ವಾರ್ಟರ್ಫೈನಲ್ನಲ್ಲಿ ಪ್ರಬಲ ಕೊರಿಯನ್ನರಿಗೆ ಶರಣಾಗುವುದರೊಂದಿಗೆ ಒಂದು ಪದಕದ ಅವಕಾಶ ಭಾರತಕ್ಕೆ ಕೈತಪ್ಪಿತು. ಆದರೆ, ದೀಪಿಕಾ ಕುಮಾರಿ ಮಹಿಳಾ ವೈಯಕ್ತಿಕ ವಿಭಾಗದಲ್ಲಿ ಇನ್ನೂ ಕಣದಲ್ಲಿದ್ಧಾರೆ. ಹಾಗೆಯೇ, ಮೂವರು ಪುರುಷ ಬಿಲ್ಲುಗಾರರೂ ಕೂಡ ವೈಯಕ್ತಿಕ ವಿಭಾಗ ಹಾಗೂ ಪುರುಷರ ತಂಡದ ಸ್ಪರ್ಧಾ ಕಣದಲ್ಲಿದ್ದಾರೆ. ಹೀಗಾಗಿ, ಪದಕಗಳ ಭರವಸೆಯಂತೂ ಇನ್ನೂ ಇದೆ. ಅಥ್ಲೆಟಿಕ್ಸ್: ಪದಕ ಸಾಧ್ಯತೆ 1
ಅಥ್ಲೆಟಿಕ್ಸ್ ವಿಭಾಗದಿಂದ 17 ಭಾರತೀಯರು ಕಣದಲ್ಲಿದ್ಧಾರೆ. ಆದರೆ, ವಿಶ್ವಮಟ್ಟದಲ್ಲಿ ಭಾರತದ ಅಥ್ಲೀಟ್ಗಳ ಪ್ರಾಬಲ್ಯ ಯಾವತ್ತೂ ಕಡಿಮೆಯೇ. ಮಿಲ್ಖಾ ಸಿಂಗ್ ಮತ್ತು ಪಿಟಿ ಉಷಾ ಅವರಂಥ ಲೆಜೆಂಡ್ಗಳಿಗೇ ಒಲಿಂಪಿಕ್ಸ್ ಪದಕ ಕೈಗೆಟುಕದೇ ಹೋಗಿತ್ತು. ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಅವರಿಗೆ ಒಂದು ಅವಕಾಶ ಇದೆ. ಕಳೆದ ವರ್ಷ ನೀರಜ್ ಅವರು 88.07 ಮೀಟರ್ ದೂರಕ್ಕೆ ಜಾವೆಲಿನ್ ಎಸೆದಿದ್ದರು. ಆ ಸಾಧನೆಯನ್ನ ನೀರಜ್ ಮೀರಿದಲ್ಲಿ ಪದಕ ಸಾಧ್ಯತೆ ಇದೆ. ಸದ್ಯ ಒಲಿಂಪಿಕ್ ದಾಖಲೆ 90.57 ಮೀಟರ್ ಇದೆ. ಬ್ಯಾಡ್ಮಿಂಟನ್: ಪದಕ ಸಾಧ್ಯತೆ 1
ಈ ಕ್ರೀಡೆಯಲ್ಲಿ ನಾಲ್ವರು ಭಾರತೀಯರು ಕಣದಲ್ಲಿದ್ದಾರೆ. ಪುರುಷರ ವೈಯಕ್ತಿಕ ವಿಭಾಗದಲ್ಲಿ ಸಾಯಿ ಪ್ರಣೀತ್ ಅವರು ಒಂದು ಪಂದ್ಯ ಸೋತಿದ್ದಾರೆ. ಪುರುಷರ ಡಬಲ್ಸ್ನಲ್ಲಿ ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಮೊದಲ ಪಂದ್ಯದಲ್ಲಿ ಗೆಲುವು ಪಡೆದಿದ್ದಾರೆ. ಇನ್ನು, ಮಹಿಳಾ ವಿಭಾಗದಲ್ಲಿ ಪಿ.ವಿ. ಸಿಂಧು ಮೊದಲ ಪಂದ್ಯವನ್ನ ಸುಲಭವಾಗಿ ಜಯಿಸಿದ್ದಾರೆ. ಇಲ್ಲಿ ಇವರಿಂದ ಒಂದು ಪದಕ ನಿರೀಕ್ಷಿಸಬಹುದು.
ಬಾಕ್ಸಿಂಗ್: ಪದಕ ಸಾಧ್ಯತೆ 1ಪ್ರಮುಖ ಸ್ಪರ್ಧಿ ವಿಕಾಸ್ ಕೃಷ್ಣನ್ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದಾರೆ. ಅಮಿತ್ ಪಂಘಲ್, ಮನೀಶ್ ಕೌಶಿಕ್, ಆಶಿಶ್ ಕುಮಾರ್ ಮ ತ್ತು ಸತೀಶ್ ಕುಮಾರ್ ಅವರು ವಿವಿಧ ತೂಕ ವಿಭಾಗದಲ್ಲಿರುವ ಇತರ ಭಾರತೀಯ ಸ್ಪರ್ಧಿಗಳಾಗಿದ್ದಾರೆ. ಮಹಿಳಾ ವಿಭಾಗದಲ್ಲಿರುವ ಮೇರಿ ಕೋಮ್ ಅವರಿಂದ ಒಂದು ಪದಕ ನಿರೀಕ್ಷಿಸಬಹುದು.
ಈಕ್ವೆಸ್ಟ್ರಿಯನ್: ಪದಕ ಸಾಧ್ಯತೆ ಇಲ್ಲ. ಫಾವೂದ್ ಮಿರ್ಜಾ ಇಲ್ಲಿ ಸ್ಪರ್ಧಿಯಾಗಿದ್ದಾರೆ.
ಫೆನ್ಸಿಂಗ್: ಪದಕ ಸಾಧ್ಯತೆ ಇಲ್ಲ. ಮಹಿಳಾ ವಿಭಾಗದಲ್ಲಿ ಸಿ.ಎ. ಭವಾನಿ ದೇವಿ ಈ ಕ್ರೀಡೆಯಲ್ಲಿ
ಭಾರತವನ್ನು ಪ್ರತಿನಿಧಿಸಿರುವ ಏಕೈಕ ಸ್ಪರ್ಧಿ. ಆದರೆ, ಒಲಿಂಪಿಕ್ ಪದಕ ಗೆಲ್ಲುವ ಸಾಧ್ಯತೆ ಬಹುತೇಕ ಕಡಿಮೆ.
ಹಾಕಿ: ಪದಕ ಸಾಧ್ಯತೆ ಕಡಿಮೆ. ಭಾರತದ ಪುರುಷ ಮತ್ತು ಮಹಿಳಾ ತಂಡಗಳು ಪಾಲ್ಗೊಂಡಿವೆ. ಪುರುಷರ ತಂಡ ತನ್ನ ಪ್ರದರ್ಶನದ ಮಟ್ಟವನ್ನು ಒಂದು ಹಂತ ಎತ್ತರಿಸಿದರೆ ಪದಕ ಗೆಲ್ಲುವ ಅವಕಾಶ ಇದೆ. ಮಹಿಳಾ ತಂಡಕ್ಕೆ ಇದು ಕಷ್ಟಸಾಧ್ಯ.
ಗೋಲ್ಫ್: ಪದಕ ಸಾಧ್ಯತೆ 1. ಮೂವುರ ಭಾರತೀಯರು ಇಲ್ಲಿ ಸ್ಪರ್ಧಿಸಿದ್ಧಾರೆ. ಪುರುಷರ ವಿಭಾಗದಲ್ಲಿ ಅನಿರ್ಬನ್ ಲಾಹಿರಿ ಹಾಗೂ ಉದಯನ್ ಮಾನೆ ಮತ್ತು ಮಹಿಳಾ ವಿಭಾಗದಲ್ಲಿ ಅದಿತಿ ಅಶೋಕ್ ಅವರಿದ್ದಾರೆ. ಬೆಂಗಳೂರಿನ ಯುವತಿ ಅದಿತಿ ಅಶೋಕ್ ಅವರು ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ಧಾರೆ.
ಜಿಮ್ನಾಸ್ಟಿಕ್ಸ್: ಪದಕ ಸಾಧ್ಯತೆ ಇಲ್ಲ. ಪ್ರಣತಿ ನಾಯಕ್ ಅವರು ಇಲ್ಲಿ ಬಹುತೇಕ ಕೊನೆಯ ಸ್ಥಾನ ಗಳಿಸಿದ್ದಾರೆ.
ಜೂಡೋ: ಪದಕ ಸಾಧ್ಯತೆ ಇಲ್ಲ: ಭಾರತದ ಏಕೈಕ ಸ್ಪರ್ಧಿ ಶುಶೀಲಾ ಲಿಕ್ಮಬಮ್ ಅವರು ಮೊದಲ ಸುತ್ತಿನಲ್ಲೇ ಸೋತು ನಿರ್ಗಮಿಸಿದ್ದಾರೆ.
ರೋವಿಂಗ್: ಪದಕ ಸಾಧ್ಯತೆ ಕಡಿಮೆ. ಪುರುಷರ ಲೈಟ್ವೈಟ್ ಡಬಲ್ ಸ್ಕಲ್ಸ್ ಸ್ಪರ್ಧೆಯಲ್ಲಿ ಅರುಣ್ ಲಾಲ್ ಮತ್ತು ಅರವಿಂದ್ ಸಿಂಗ್ ಅವರು ಉತ್ತಮ ಪ್ರದರ್ಶನ ನೀಡಿದರೂ ಪದಕದ ಸಾಧ್ಯತೆ ಕಡಿಮೆಯೇ.
ಸೇಲಿಂಗ್: ಪದಕ ಸಾಧ್ಯತೆ ಕಡಿಮೆ. ಇಲ್ಲಿ ನೇತ್ರಾ ಕುಮಾನನ್, ವಿಷ್ಣು ಸರವಣನ್, ಕೆ.ಸಿ. ಗಣಪತಿ ಅವರು ಸ್ಪರ್ಧಿಸಿದ್ದಾರೆ.
ಶೂಟಿಂಗ್: ಪದಕ ಸಾಧ್ಯತೆ 2-3. ಶೂಟಿಂಗ್ನಲ್ಲಿ ಭಾರತ ಹೆಚ್ಚಿನ ಪದಕ ಗೆಲ್ಲುವ ಶಕ್ತಿ ಹೊಂದಿದೆ. ಬಹುತೇಕ ಎಲ್ಲರೂ ಸಮರ್ಥ ಶೂಟರ್ಗಳೇ. ಆದರೆ, ಸೌರಭ್ ಚೌಧರಿ, ಅಭಿಷೇಕ್ ವರ್ಮಾ, ಮನು ಭಾಕರ್, ಯಶಸ್ವಿನಿ ದೇಸವಾಲ್, ಅಪೂರ್ವಿ ಚಾಂಡೇಲಾ, ಇಲಾವೇನಿಲ್ ವಲೇರಿವನ್ ಅವರು ಪದಕ ಗೆಲ್ಲದೇ ನಿರಾಶೆ ಮೂಡಿಸಿದ್ದಾರೆ. ಪುರುಷರ 10 ಮೀಟರ್ ಏರ್ ಪಿಸ್ತೂಲ್, ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಮತ್ತು 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಭಾರತದ ಸವಾಲು ಅಂತ್ಯವಾಗಿದೆ. ಪುರುಷರ ಸ್ಕೀಟ್, 10 ಮೀಟರ್ ಏರ್ ರೈಫಳ್ ಮತ್ತು 50 ಮೀಟರ್ ರೈಫಲ್ ಹಾಗೂ ಮಹಿಳೆಯರ 25 ಮೀಟರ್ ಪಿಸ್ತೂಲ್ ಮತ್ತು 50 ಮೀಟರ್ ರೈಫಲ್ ಸ್ಪರ್ಧೆಗಳು ನಡೆಯುವುದು ಬಾಕಿ ಇದೆ. ಮಿಶ್ರ ತಂಡದ 10 ಮೀಟರ್ ಏರ್ ರೈಫಲ್ ಮತ್ತು 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಗಳೂ ಇವೆ.
ಸ್ವಿಮಿಂಗ್: ಪದಕ ಸಾಧ್ಯತೆ ಇಲ್ಲ. ಭಾರತ ಈಜು ಸ್ಪರ್ಧೆಯಲ್ಲಿ ಈಗ ವಿಶ್ವಮಟ್ಟದಲ್ಲಿ ಅಂಬೆಗಾಲಿಡಲು ಆರಂಭಿಸಿದೆ. ಭಾರತವನ್ನು ಪ್ರತಿನಿಧಿಸಿರುವ ಶ್ರೀಹರಿ ನಟರಾಜ್, ಸಾಜನ್ ಪ್ರಕಾಶ್ ಮತ್ತು ಮಾನಾ ಪಟೇಲ್ ಅವರು ಎ ಮಟ್ಟದಲ್ಲಿ ಒಲಿಂಪಿಕ್ಗೆ ಅರ್ಹತೆ ಗಿಟ್ಟಿಸಿರುವುದೇ ಸದ್ಯ ಹೆಮ್ಮೆಯ ವಿಷಯ.
ಟೇಬಲ್ ಟೆನಿಸ್: ಪದಕ ಸಾಧ್ಯತೆ ಇಲ್ಲ. ಟೇಬಲ್ ಟೆನಿಸ್ ಕ್ರೀಡೆಯಲ್ಲೂ ಭಾರತದ ಬಲ ಈಗೀಗ ಹೆಚ್ಚುತ್ತಿದೆ. ಆದರೆ, ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲುವ ಸಾಧ್ಯತೆ ಕಡಿಮೆ.
ಟೆನಿಸ್: ಪದಕ ಸಾಧ್ಯತೆ ಕಡಿಮೆ: ಪದಕ ಗೆಲ್ಲುವ ಅವಕಾಶ ಇದ್ದ ಸಾನಿಯಾ ಮಿರ್ಜಾ ಮತ್ತು ಅಂಕಿತಾ ರೈನಾ ಜೋಡಿ 32ರ ಸುತ್ತಿನಲ್ಲಿ ವೀರೋಚಿತ ಹೋರಾಟ ತೋರಿ ಸೋಲಪ್ಪಿದರು. ಪುರುಷರ ಸಿಂಗಲ್ಸ್ನಲ್ಲಿ ಪಾಲ್ಗೊಂಡಿರುವ ಸುಮಿತ್ ನಗಾಲ್ ಅವರು ಮೊದಲ ಸುತ್ತಿನಲ್ಲಿ ಗೆದ್ದರಾದರೂ ಎರಡನೇ ಸುತ್ತಿನಲ್ಲಿ ಪ್ರಬಲ ರಷ್ಯನ್ ಸ್ಪರ್ಧಿ ಡೇನಿಲ್ ಮೆಡ್ವೆಡೆವ್ ಅವರ ಸವಾಲನ್ನ ಎದುರಿಸಿ ಮುನ್ನುಗ್ಗುವುದು ಕಷ್ಟ.
ಕುಸ್ತಿ: ಪದಕ ಸಾಧ್ಯತೆ 2-3. ಶೂಟಿಂಗ್ ನಂತರ ಭಾರತ ಹೆಚ್ಚು ಬಲ ಹೊಂದಿರುವುದು ವ್ರೆಸ್ಲಿಂಗ್ನಲ್ಲಿ. ಭಜರಂಗ್ ಪೂನಿಯಾ ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಮಹಿಳಾ ವಿಭಾದಲ್ಲಿ ವಿನೇಶ ಫೋಗಾಟ್, ಸೀಮಾ ಬಿಸ್ಲಾ ಅವರೂ ಪದಕ ಗೆಲ್ಲುವ ಸಾಮರ್ಥ್ಯ ಹೊಂದಿದ್ದಾರೆ. ನಿರೀಕ್ಷಿಸಿದಂತೆ ನಡೆದರೆ ಭಾರತಕ್ಕೆ ಈ ಬಾರಿ 8-10 ಪದಕಗಳು ದಕ್ಕಬಹುದು. ಇದಾದಲ್ಲಿ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತದ ಅತ್ಯುತ್ತಮ ಸಾಧನೆ ಇದಾಗಲಿದೆ.