ನ್ಯೂಯಾರ್ಕ್: ನಾನು ಹಲವು ರಾಷ್ಟ್ರಗಳ ಯುದ್ಧ ನಿಲ್ಲಿಸಿದ್ದೇನೆ, ನನಗೆ ನೊಬೆಲ್ ಪ್ರೈಸ್ ಸಿಗಬೇಕು ಎಂದು ಕೊಚ್ಚಿಕೊಳ್ಳುತ್ತಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ನಿರಾಸೆಯಾಗಿದೆ. ಇದಕ್ಕೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು ಬೆದರಿಕೆ ಹಾಕಿ ಯುದ್ಧ ನಿಲ್ಲಿಸಿದ ಬಿಟ್ಟಿ ಕ್ರೆಡಿಟ್ ತೆಗೆದುಕೊಂಡರೆ ನೊಬೆಲ್ ಪ್ರೈಸ್ ಸಿಗಲ್ಲ ಎಂದು ಕಾಲೆಳೆದಿದ್ದಾರೆ.
ನಾನು ಭಾರತ-ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದೇನೆ ಎಂದು ಟ್ರಂಪ್ ಪದೇ ಪದೇ ಕೊಚ್ಚಿಕೊಳ್ಳುತ್ತಿದ್ದರು. ಸ್ವತಃ ಭಾರತ ಮತ್ತು ಪಾಕಿಸ್ತಾನದ ನಾಯಕರೇ ಮೂರನೆಯವರು ಮಧ್ಯಸ್ಥಿಕೆ ವಹಿಸಿಲ್ಲ ಎಂದರೂ ಟ್ರಂಪ್ ನಾನು ನಾನು ಎನ್ನುತ್ತಲೇ ಇದ್ದರು.
ವ್ಯಾಪಾರ ಒಪ್ಪಂದದ ಬೆದರಿಕೆ ಹಾಕಿ ಯುದ್ಧ ನಿಲ್ಲಿಸಿದ್ದೇನೆ ಎಂದು ಅವರೇ ಒಮ್ಮೆ ಬಹಿರಂಗವಾಗಿ ಹೇಳಿದ್ದರು. ಇದೀಗ ಗಾಜಾದಲ್ಲಿ ಶಾಂತಿ ಮರುಸ್ಥಾಪನೆಗೆ ಮುಂದಾಗಿದ್ದಕ್ಕೂ ನಾನೇ ಕಾರಣ ಎಂದು ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದಾರೆ.
ಆದರೆ ಇಷ್ಟೆಲ್ಲಾ ಮಾಡುವ ಟ್ರಂಪ್ ಇನ್ನೊಂದೆಡೆ ಭಾರತ ಸೇರಿದಂತೆ ತನ್ನ ತಾಳಕ್ಕೆ ಕುಣಿಯದ ರಾಷ್ಟ್ರಗಳ ಮೇಲೆ ಸುಂಕದ ಬರೆ ಹಾಕಿ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಒಂದೆಡೆ ಯುದ್ಧ ನಿಲ್ಲಿಸಿದ್ದೇನೆ ಎಂದು ಕೊಚ್ಚಿಕೊಳ್ಳುವ ಟ್ರಂಪ್ ಇನ್ನೊಂದೆಡೆ ಇತರೆ ರಾಷ್ಟ್ರಗಳ ಆಂತರಿಕ ನೀತಿಗಳಲ್ಲಿ ಬೆದರಿಕೆ ಮೂಲಕ ಮೂಗು ತೂರಿಸಿಕೊಂಡು ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದಾರೆ.
ಇದೇ ಕಾರಣಕ್ಕೇ ಬಹುಶಃ ಅವರಿಗೆ ನೊಬೆಲ್ ಪ್ರೈಸ್ ಕೈತಪ್ಪಿದೆ. ಶಾಂತಿ ಎಂದರೆ ಬೆದರಿಕೆ ಹಾಕಿ, ಒತ್ತಡ ಹಾಕಿ ಶಾಂತಿ ಸ್ಥಾಪಿಸುವುದು ಅಲ್ಲ. ಪಬ್ಲಿಕ್ ಆಗಿ ಮರ್ಯಾದೆ ಬಿಟ್ಟು ನನಗೆ ಪ್ರಶಸ್ತಿ ಕೊಡಿ ಎಂದಿದ್ದಕ್ಕೆ ಈಗ ಟ್ರಂಪ್ ಗೆ ಸರಿಯಾಗಿಯೇ ಮುಖಭಂಗವಾಗಿದೆ ಎನ್ನುತ್ತಿದ್ದಾರೆ ಪಬ್ಲಿಕ್.