ಬೆಂಗಳೂರು: ಸಿಹಿ ತಿನಿಸು ತಿಂದ ತಕ್ಷಣ ಹುಳಿ ಪದಾರ್ಥ ಸೇವಿಸಬಾರದು ಎಂದು ಹಿರಿಯರು ಹೇಳುವುದನ್ನು ಕೇಳಿದ್ದೇವೆ. ಇದಕ್ಕೆ ಆರೋಗ್ಯಕರ ಕಾರಣವೂ ಇದೆ. ಅಷ್ಟಕ್ಕೂ ಸಿಹಿ ಮತ್ತು ಹುಳಿ ರುಚಿಯ ಆಹಾರವನ್ನು ಒಟ್ಟಿಗೇ ಸೇವಿಸಬಾರದು ಯಾಕೆ ನೋಡೋಣ.
ಆಯುರ್ವೇದದ ಪ್ರಕಾರ ಸಿಹಿ ಮತ್ತು ಹುಳಿ ಎರಡೂ ವಿರುದ್ಧ ಆಹಾರಗಳು. ಹೀಗಾಗಿ ಇವುಗಳನ್ನು ಜೊತೆಯಾಗಿ ತಿನ್ನುವುದರಿಂದ ಜೀರ್ಣಕ್ರಿಯೆ ಮೇಲೆ ಪ್ರಭಾವ ಬೀರಿ ಅಜೀರ್ಣದಂತಹ ಸಮಸ್ಯೆಯಾಗಬಹುದು. ಹುಳಿ ಅಂಶವಿರುವ ಆಹಾರ ಅಥವಾ ಹಣ್ಣುಗಳಲ್ಲಿ ಸಿಟ್ರಸ್ ಅಂಶ ಹೆಚ್ಚಿರುತ್ತದೆ.
ಸಿಟ್ರಸ್ ಅಂಶವಿರುವ ಆಹಾರ ವಸ್ತುಗಳು ಜೀರ್ಣಕ್ರಿಯೆಗೆ ಸಹಕಾರಿ. ಆದರೆ ಇದರ ಜೊತೆಗೆ ಕೆಲವೊಂದು ಪದಾರ್ಥಗಳನ್ನು ಸೇವಿಸಬಾರದು. ಅದರಲ್ಲೂ ವಿಶೇಷವಾಗಿ ಸಿಹಿ ತಿನಿಸು ಅಥವಾ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸೇವಿಸದಿದ್ದರೆ ಉತ್ತಮ. ಹುಳಿ ಮತ್ತು ಹಾಲು ಬೆರೆತರೆ ಏನಾಗುತ್ತದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ತಾನೇ?
ಸಿಹಿಯ ಜೊತೆಗೆ ಹೆಚ್ಚು ಆಮ್ಲೀಯ ಗುಣವಿರುವ ಹುಳಿ ಅಂಶದ ಆಹಾರ ಪದಾರ್ಥ ಸೇರಿಕೊಂಡಾಗ ಹೊಟ್ಟೆಯಲ್ಲಿ ಜೀರ್ಣಕ್ರಿಯೆ, ಗ್ಯಾಸ್ಟ್ರಿಕ್, ಅಸಿಡಿಟಿ, ಹೊಟ್ಟೆ ತೊಳೆಸಿದಂತಾಗುವುದು ಇತ್ಯಾದಿ ಸಮಸ್ಯೆಗಳು ಕಂಡುಬರಬಹುದು. ಹೀಗಾಗಿ ಸಿಹಿ ತಿನಿಸಿನ ಜೊತೆ ಹುಳಿ ಅಂಶವಿರುವ ಆಹಾರವನ್ನು ತಪ್ಪಿಯೂ ಸೇವಿಸಬೇಡಿ.