ಬೆಳಗ್ಗೆ ಎದ್ದ ತಕ್ಷಣ ಮುಖ ತೊಳೆಯದೆ ಒಂದು ಲೋಟ ಬಿಸಿ ನೀರನ್ನು ಕುಡಿಯಿರಿ ಎಂದು ಮನೆಯಲ್ಲಿ ನಮ್ಮ ಹಿರಿಯರು ಪ್ರತಿದಿನ ಬೆಳಗ್ಗೆ ಹೇಳುವುದನ್ನು ಕೇಳಿರು ತ್ತೇವೆ. ಆದರೆ ಬಿಸಿ ನೀರನ್ನು ಏನು ಕುಡಿಯೋದು ಅಂತಾ ನಾವು ಅನೇಕ ಬಾರಿ ಅವರ ಮಾತನ್ನು ನಿರ್ಲಕ್ಷ್ಯ ಮಾಡಿರುತ್ತೇವೆ. ಆದರೆ, ಇನ್ನು ಮುಂದೆ ಅವರ ಮಾತನ್ನು ನಿರ್ಲಕ್ಷಿಸಬೇಡಿ.
ಏಕೆಂದರೆ ಬೆಳಗ್ಗೆ ಎದ್ದ ತಕ್ಷಣ ಬಿಸಿ ನೀರನ್ನು ಕುಡಿಯುವುದರಿಂದ ನಿಮ್ಮ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಾಗುತ್ತವೆ. ನಮ್ಮ ಜೀವನಶೈಲಿ ಮತ್ತು ದೇಹದ ಅಗತ್ಯಗಳಿಗೆ ಅನುಗುಣವಾಗಿ ಪ್ರತಿದಿನ 11 ರಿಂದ 16 ಲೋಟ ನೀರನ್ನು ಕುಡಿಯಲು ವೈದ್ಯರು ಶಿಫಾರಸು ಮಾಡುತ್ತಾರೆ. ನಮ್ಮಲ್ಲಿ ಹೆಚ್ಚಿನ ವರು ತಣ್ಣೀರನ್ನು ಕುಡಿಯಲು ಒಲವು ತೋರಿದರೆ, ಆಯುರ್ವೇದವು ತಣ್ಣನೆ ನೀರನ್ನು ಕುಡಿಯುವ ಬದಲು ಬೆಚ್ಚಗಿನ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತದೆ.
ಬೆಳಗ್ಗೆ ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಅದು ದೇಹದ ಒಳಗಿನ ಕ್ರಿಯೆಗಳನ್ನು ನಮಗೆ ತಿಳಿಯದಂತೆ ಗುಣಪಡಿಸುತ್ತದೆ. ಚಯಾಪಚಯ ಕ್ರಿಯೆ ಹೆಚ್ಚಿಸುತ್ತದೆ, ಜೀರ್ಣಶಕ್ತಿಯನ್ನು ಬಲಗೊಳಿಸುತ್ತದೆ. ಬೆಚ್ಚಗಿನ ನೀರು ಕರುಳನ್ನು ಬಿಗಿಗೊಳಿಸುತ್ತದೆ ಮತ್ತು ಚಯಾಪಚಯ ಕ್ರಿಯೆಯು ದೇಹದಲ್ಲಿರುವ ತ್ಯಾಜ್ಯವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳು ಬಹಿರಂಗಪಡಿಸಿವೆ.
ನಿಮ್ಮ ದೇಹದಲ್ಲಿರುವ ತ್ಯಾಜ್ಯವನ್ನು ಹೊರ ಹಾಕುತ್ತದೆ
ನಿಮ್ಮ ದೇಹದಲ್ಲಿರುವ ತ್ಯಾಜ್ಯವನ್ನು ಹೊರ ಹಾಕುವಲ್ಲಿ ಬಿಸಿ ನೀರು ಕೆಲಸ ಮಾಡುವಂತೆ ಬೇರೆ ಯಾವುದು ಅಷ್ಟೊಂದು ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ. ನಾವು ಕುಡಿಯುವ ಬಿಸಿ ನೀರು ಸೇವಿಸುವ ಆಹಾರವನ್ನು ದೇಹದಲ್ಲಿ ಒಡೆಯಲು ಸಹಾಯ ಮಾಡುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಶಕ್ತಿಯುತಗೊಳಿಸುತ್ತದೆ. ಇದರಿಂದ ನಾವು ಸೇವಿಸಿದ ಆಹಾರ ಜೀರ್ಣಿಸಿಕೊಳ್ಳಲು ಸುಲಭ ಮಾಡುತ್ತದೆ. ನೀವು ಮಲಬದ್ಧತೆ, ಕೆಮ್ಮು, ಶೀತ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿದ್ದರೆ, ನೀವು ಪ್ರತಿದಿನ ಬಿಸಿ ನೀರನ್ನು ಕುಡಿಯುತ್ತಲೇ ಇರುವುದು ಒಳ್ಳೆಯದು.
ಮಲಬದ್ಧತೆ ನಿವಾರಿಸುತ್ತದೆ
ಬಿಸಿ ನೀರನ್ನು ನೀವು ದೀರ್ಘಕಾಲದವರೆಗೆ ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡರೆ ಮಲಬದ್ಧತೆಗೆ ಸಹ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರನ್ನು ಕುಡಿಯುವುದರಿಂದ ಕರುಳಿನ ಚಲನೆ ಉತ್ತಮಗೊಳ್ಳುವುದು. ಹೊಟ್ಟೆ ನೋವು ನಿವಾರಣೆಗೂ ಇದು ಉತ್ತಮವಾಗಿ ಕೆಲಸ ಮಾಡುತ್ತದೆ.
ತಲೆ ನೋವಿಗೆ ಪರಿಹಾರ
ಬಿಸಿ ನೀರು ಕುಡಿಯುವುದರಿಂದ ನಿಮಗಿರುವ ಮೈಗ್ರೇನ್ ಮತ್ತು ಇತರೆ ರೀತಿಯ ತಲೆನೋವು, ಮುಟ್ಟಿನ ಸಮಯದಲ್ಲಿ ಆಗುವಂತಹ ನೋವುಗಳಿಂದ ತಕ್ಷಣ ಪರಿಹಾರ ಸಿಗುತ್ತದೆ. ಬಿಸಿ ನೀರು ಚರ್ಮಕ್ಕೆ ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ನಿಮ್ಮ ದೇಹದ ಚರ್ಮವನ್ನು ಕಾಂತಿಯುತವಾಗಿ ಕಾಣಲು ಸಹಾಯ ಮಾಡುತ್ತದೆ.
ತೂಕ ಇಳಿಸಲು ಸಹಾಯಕಾರಿ
ಬಿಸಿ ನೀರು ನೀವು ದಿನನಿತ್ಯ ಕುಡಿಯುವುದರಿಂದ ನಿಮ್ಮ ದೇಹದಲ್ಲಿರುವ ಹೆಚ್ಚುವರಿ ತೂಕವನ್ನು ಕಳೆದುಕೊಳ್ಳಲು ಬಹಳ ಸಹಾಯ ಮಾಡುತ್ತದೆ. ಬಿಸಿ ನೀರು ದೇಹದ ತಾಪಮಾನವನ್ನು ಹೆಚ್ಚಿಸುತ್ತದೆ, ಇದರಿಂದಾಗಿ ಅದರ ಚಯಾಪಚಯ ಕ್ರಿಯೆ ಸುಧಾರಿಸುತ್ತದೆ. ಇದು ಹೆಚ್ಚಿನ ಕ್ಯಾಲೊರಿಗಳನ್ನು ಸುಡಲು ಸಹಾಯ ಮಾಡುತ್ತದೆ ಮತ್ತು ಮೂತ್ರಪಿಂಡಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.
ಚರ್ಮವು ಸಹ ಕಾಂತಿಯುತವಾಗಿರುತ್ತದೆ
ಬಿಸಿ ನೀರನ್ನು ಕುಡಿಯುವುದರಿಂದ ಚರ್ಮದಲ್ಲಿರುವ ಜೀವಕೋಶಗಳನ್ನು ಸರಿಪಡಿಸುವ ಮೂಲಕ ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ. ಚರ್ಮದ ಆರೋಗ್ಯಕ್ಕೆ ಹೆಚ್ಚು ಪ್ರಯೋಜನವಾಗುವಂತೆ, ಬಿಸಿ ನೀರನ್ನು ನಿಂಬೆಯ ಹುಳಿಯೊಂದಿಗೆ ಮಿಶ್ರಣ ಮಾಡಿ ಕುಡಿಯಿರಿ, ಏಕೆಂದರೆ ಇದು ದೇಹದ ಪಿಎಚ್ ಸಮತೋಲನ ರಕ್ಷಿಸುತ್ತದೆ. ಮೊಡವೆಗಳು, ಸುಕ್ಕುಗಳು ಮತ್ತು ಕಪ್ಪು ಕಲೆಗಳಿಂದ ನಿಮ್ಮ ಮುಖವನ್ನು ದೂರವಿಡಬಹುದು.