ಭಾರತೀಯರ ಮನೆಗಳಲ್ಲಿ ದಿನನಿತ್ಯದ ಅಡುಗೆಗೆ ವಿವಿಧ ಮಸಾಲೆ ಪದಾರ್ಥಗಳು ಮತ್ತು ಗಿಡಮೂಲಿಕೆಗಳನ್ನು ಬಳಸುತ್ತಾರೆ. ಈ ಪದಾರ್ಥಗಳಿಂದ ವಿವಿಧ ರೀತಿಯ ಕಷಾಯ ಕೂಡ ಮಾಡಲಾಗುತ್ತದೆ. ಇದು ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅದರಲ್ಲೂ ಮಳೆಗಾಲದಲ್ಲಿ ಶೀತ, ಜ್ವರ ಮತ್ತು ಇನ್ನಿತರ ಸೋಂಕು ಹೆಚ್ಚಾಗಿರುತ್ತದೆ ಇಂತಹ ಸಂದರ್ಭದಲ್ಲಿ ಪದೇ ಪದೇ ಆಸ್ಪತ್ರೆಗೆ ಹೋಗುವುದು ಅಷ್ಟು ಸಮಂಜಸವಲ್ಲ. ಹೀಗಾಗಿ ಮನೆಯಲ್ಲಿಯೇ ಒಂದಷ್ಟು ಸೋಂಕು ನಿವಾರಕ ಕಷಾಯಗಳನ್ನು ತಯಾರಿಸುವುದು ಸೂಕ್ತ.
ಕಷಾಯ ಎಂದರೆ ಹಲವು ಗಿಡಮೂಲಿಕೆ ಮತ್ತು ಮಸಾಲೆ ಪದಾರ್ಥಗಳಿಂದ ತಯಾರಿಸುವ ಪಾನೀಯ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಗಿಡಮೂಲಿಕೆ ಮತ್ತು ಮಸಲಾ ಪದಾರ್ಥಗಳನ್ನು ನೀರಿನಲ್ಲಿ ಹಾಕಿ ಕುದಿಸಿ ಕಷಾಯ ತಯಾರಿಸಲಾಗುತ್ತದೆ. ಗಿಡಮೂಲಿಕೆಗಳ ಆಯ್ಕೆಯು ಕೂಡ ಕಷಾಯ ತಯಾರಿಸುವ ಕ್ರಮಕ್ಕೆ ಮುಖ್ಯ. ವಿಶೇಷವಾಗಿ ಮಳೆಗಾಲಕ್ಕೆ ಅನುಗುಣವಾದ ಗಿಡಮೂಲಿಕೆಗಳನ್ನು ಕಷಾಯಕ್ಕೆ ಆಯ್ಕೆ ಮಾಡಬೇಕು.
ಆಯುರ್ವೇದ ತಜ್ಞರಾದ ಡಾ. ರಾಮ್.ಎನ್. ಕುಮಾರ್ ಅವರ ಪ್ರಕಾರ, ಮಳೆಗಾಲ ನಮ್ಮನ್ನು ಹಲವಾರು ಸೋಂಕುಗಳಿಗೆ ತುತ್ತಾಗುವಂತೆ ಮಾಡುತ್ತದೆ. ಆಯುರ್ವೇದ ಮತ್ತು ಅದರ ಕಾಲೋಚಿತ ನಿಯಮ, ಮಾರ್ಗಸೂಚಿಗಳು ಋತುಗಳ ಬದಲಾವಣೆಯ ಜತೆಗೆ ಆರೋಗ್ಯವಾಗಿರಲು ನಮಗೆ ಸಹಾಯ ಮಾಡುತ್ತದೆ. ಮಳೆಗಾಲದಲ್ಲಿ ಡೆಂಗ್ಯೂ ಮತ್ತು ಹಂದಿ ಜ್ವರದಂತಹ ಮಾರಕ ರೋಗಗಳು ಸುಲಭವಾಗಿ ಹರಡುತ್ತವೆ. ಹೀಗಾಗಿ ಹಲವಾರು ಆರೋಗ್ಯ ಸಮಸ್ಯೆಗಳನ್ನು ದೂರವಿಡಲು ಕಷಾಯ ಮಾಡಿ. ಇದು ಪರಿಣಾಮಕಾರಿ ರೋಗನಿರೋಧಕ ಕ್ರಮವಾಗಿದೆ. ಏಲಕ್ಕಿ, ಲವಂಗ, ಜೀರಾ, ಶುಂಠಿ, ತುಳಸಿ, ಜೇನುತುಪ್ಪ ಮತ್ತು ಬೆಲ್ಲದಂತಹ ವಿವಿಧ ಅಡುಗೆ ಪದಾರ್ಥಗಳನ್ನು ಕಷಾಯಕ್ಕೆ ಬಳಸಬಹುದು.
ಅಮೃತಬಳ್ಳಿಯ ಕಷಾಯ
ಅಮೃತಬಳ್ಳಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ತಯಾರಿಸಿದ ಕಷಾಯ ಎಲ್ಲಾ ರೀತಿಯ ಸೋಂಕಿನಿಂದ ಮುಕ್ತಿ ನೀಡುತ್ತದೆ. ಸ್ವಲ್ಪ ನೀರು ಜತೆಗೆ ಅಮೃತಬಳ್ಳಿ ಎಲೆಗಳನ್ನು ಕುದಿಸಿ ಅದರ ನೀರನ್ನು ಶೋಧಿಸಿ ಕುಡಿದರೆ, ಜ್ವರ, ಶೀತ ದೂರವಾಗುತ್ತದೆ.
ತುಳಸಿ ಮತ್ತು ಅಮೃತಬಳ್ಳಿ
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ವಿಶೇಷವಾದ ಆಯುರ್ವೇದದ ಮಿಶ್ರಣ ಎಂದರೆ ಅದು ತುಳಸಿ ಮತ್ತು ಅಮೃತಬಳ್ಳಿ. ವಿಶೇಷವಾಗಿ ಜ್ವರ ಮತ್ತು ಶೀತವನ್ನು ತಡೆಯಲು ಈ ಕಷಾಯ ಸಹಾಯಕವಾಗಿದೆ. ಜ್ವರ ಪದೇ ಪದೇ ಮರುಕಳಿಸದಂತೆ ಮಾಡಲು ತುಳಸಿ ಎಲೆ ಮತ್ತು ಅಮೃತಬಳ್ಳಿ ಎಲೆಗಳಿಂದ ತಯಾರಿಸಿದ ಕಷಾಯ ಸೇವಿಸಿ.
ತುಳಸಿ ಮತ್ತು ಕರಿಮೆಣಸು ಕಷಾಯ ಮಾಡುವ ವಿಧಾನ
ತುಳಸಿ ಮತ್ತು ಕರಿಮೆಣಸು ಕಷಾಯ ಮಾಡಲು ಬೇಕಾಗುವ ಸಾಮಾಗ್ರಿಗಳು 2 ಕಪ್ ನೀರು, 1 ಚಮಚ ಸಕ್ಕರೆ, 1 ಚಮಚ ಕರಿಮೆಣಸು, ಶುಂಠಿ, ತುಪ್ಪ, ತುಳಸಿ ಎಲೆ, ಲವಂಗ. ಮೊದಲು ಒಂದು ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ ಅದಕ್ಕೆ ಲವಂಗ, ಕರಿಮೆಣಸು, ಶುಂಠಿ ಮತ್ತು ತುಳಸಿ ಸೇರಿಸಿ. ಬಳಿಕ ನೀರು ಮತ್ತು ಸಕ್ಕರೆ ಸೇರಿಸಿ. ಇದನ್ನು ಮಧ್ಯಮ ಉರಿಯಲ್ಲಿ 15-20 ನಿಮಿಷಗಳ ಕಾಲ ಕುದಿಸಿ. ಈಗ ಕಷಾಯ ಸಿದ್ಧ. ಬಿಸಿ ಇರುವಾಗಲೇ ಕಷಾಯವನ್ನು ದಿನಕ್ಕೆ 2 ಬಾರಿ ಕುಡಿಯಿರಿ
ಮೆಂತೆ ಮತ್ತು ಅರಿಶಿಣದ ಕಷಾಯ
ಮೆಂತೆ ಮತ್ತು ಅರಿಶಿಣದ ಕಷಾಯ ತಯಾರಿಸಲು ಬೇಕಾದ ಸಾಮಾಗ್ರಿಗಳು ಪುಡಿ ಮಾಡಿದ ಮೆಂತೆ, ಅರಿಶಿಣ ಪುಡಿ, ಹಾಲು. ಮೊದಲು ಒಂದು ಪಾತ್ರೆಗೆ ಹಾಲನ್ನು ಹಾಕಿ ಕುದಿಸಿ, ನಂತರ ಇದಕ್ಕೆ ಮೆಂತೆ ಮತ್ತು ಅರಿಶಿಣ ಪುಡಿ ಸೇರಿಸಿ. ಈ ಕಷಾಯ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಶುಂಠಿ, ಜೇನುತುಪ್ಪ ಮತ್ತು ನಿಂಬೆ ರಸದ ಕಷಾಯ
ಈ ಕಷಾಯ ತಯಾರಿಸಲು ಶುಂಠಿ, ಜೇನುತುಪ್ಪ ಮತ್ತು ನಿಂಬೆ ರಸವನ್ನು ಹಾಕಿ ಚೆನ್ನಾಗಿ ಕುದಿಸಿ. ಇದನ್ನು 2 ವಾರಗಳ ತನಕ ಶೇಖರಿಸಿಡಬಹುದು. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಖಾಲಿ ಹೊಟ್ಟೆಯಲ್ಲಿ ಬಿಸಿ ಬಿಸಿಯಾಗಿ ಈ ಕಷಾಯವನ್ನು ಸೇವಿಸಿ.