Select Your Language

Notifications

webdunia
webdunia
webdunia
webdunia

ಬಿಸಿಲಿನ ಬೇಗೆ ತಣಿಸುವ ತಂಪು ತಂಪಾದ ಹಣ್ಣಿನ ಜ್ಯೂಸ್‌ಗಳು

ಬಿಸಿಲಿನ ಬೇಗೆ ತಣಿಸುವ ತಂಪು ತಂಪಾದ ಹಣ್ಣಿನ ಜ್ಯೂಸ್‌ಗಳು
ಬೆಂಗಳೂರು , ಗುರುವಾರ, 28 ಮಾರ್ಚ್ 2019 (17:12 IST)
ಬಿಸಿಲಿನ ಬೇಗೆಯೇ ಅಂತದ್ದು. ಎಷ್ಟು ನೀರು ಕುಡಿದರೂ ಸಾಕು ಎಂದೆನಿಸದೇ ಇರುವ ಕಾಲವದು. ದೇಹವು ನಿರ್ಜಲೀಕರಣಗೊಳ್ಳುವ ಸ್ಥಿತಿಯನ್ನು ತಲುಪಿರುತ್ತವೆ. ಆದುದರಿಂದಲೇ ಬಿಸಿಲಿನ ತಾಪದಲ್ಲಿ ತಂಪಾದ ಪಾನೀಯಗಳು, ಐಸ್‌ಕ್ರೀಂಗಳಿಗೆ ಬೇಡಿಕೆ ಜಾಸ್ತಿ.

ಆದರೆ ತಂಪಾದ ಪಾನೀಯಗಳೂ ಸಹ ಜಾಸ್ತಿ ಹೊತ್ತು ದಾಹವನ್ನು ತಣಿಸುವುದಿಲ್ಲ. ಕ್ಷಣಮಾತ್ರಕ್ಕೆ ಮಾತ್ರ ಬಾಯಾರಿಕೆಯನ್ನು ತಣಿಸುತ್ತವೆ. ನಾವು ಮನೆಯಲ್ಲಿಯೇ ಹಣ್ಣಿನ ರಸಗಳನ್ನು ತಯಾರಿಸಿಕೊಂಡು ಕುಡಿಯಬಹುದು. ಅಂತಹ ಹಣ್ಣಿನ ರಸಗಳನ್ನು ತಯಾರಿಸಿಕೊಂಡರೆ ದೇಹಕ್ಕೂ ಆಹ್ಲಾದ ಎಂದೆನಿಸುತ್ತದೆ. ಆರೋಗ್ಯಕ್ಕೂ ಉತ್ತಮ. ಹಾಗಾದರೆ ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದಾದ ಹಣ್ಣಿನ ರಸಗಳು ಯಾವುವು ಎಂಬುದನ್ನು ನೋಡೋಣ...
 
1) ಸೌತೆಕಾಯಿ ಜ್ಯೂಸ್:
    ತಯಾರಿಸಲು ಬೇಕಾಗುವ ಸಾಮಗ್ರಿಗಳು
* ಸೌತೆಕಾಯಿ 2
* ನೀರು 2 ಕಪ್
* ಪುದೀನ ಸ್ವಲ್ಪ
* ನಿಂಬೆರಸ 1 ಟೀ ಚಮಚ
* ಸಕ್ಕರೆ 3 ಟೀ ಚಮಚ
* ಉಪ್ಪು 1/4 ಟೀ ಚಮಚ
* ಕಾಳು ಮೆಣಸಿನಪುಡಿ 1/4 ಟೀ ಚಮಚ
* ಐಸ್‌ಕ್ಯೂಬ್ ಸ್ವಲ್ಪ
 
     ತಯಾರಿಸುವ ವಿಧಾನ:
   ಮೊದಲು ಸೌತೆಕಾಯಿಯ ಸಿಪ್ಪೆಯನ್ನು ತೆಗೆದು ಚಿಕ್ಕದಾಗಿ ಕತ್ತರಿಸಿ ಮಿಕ್ಸಿ ಜಾರಿಗೆ ಹಾಕಿಕೊಂಡು ಅದರ ಜೊತೆಗೆ ಸಕ್ಕರೆ, ಪುದೀನ, ಕಾಳುಮೆಣಸಿನಪುಡಿ, ಉಪ್ಪು ಮತ್ತು ನಿಂಬೆರಸವನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು. ಈ ಮಿಶ್ರಣಕ್ಕೆ ನೀರನ್ನು ಸೇರಿಸಿ ಮತ್ತೊಂದು ಸುತ್ತು ರುಬ್ಬಿಕೊಳ್ಳಬೇಕು. ನಂತರ ಅದಕ್ಕೆ ಐಸ್‌ಕ್ಯೂಬ್ ಅನ್ನು ಹಾಕಿದರೆ ರುಚಿಕರವಾದ ಆರೋಗ್ಯಕರವಾದ ಸೌತೆಕಾಯಿ ಜ್ಯೂಸ್ ಸವಿಯಲು ಸಿದ್ಧ. 
 
2) ಅನಾನಸ್ ಹಣ್ಣಿನ ಜ್ಯೂಸ್:
    ತಯಾರಿಸಲು ಬೇಕಾಗುವ ಸಾಮಗ್ರಿಗಳು:
* ಚಿಕ್ಕದಾಗಿ ಕತ್ತರಿಸಿದ ಅನಾನಸ್ ಹಣ್ಣು 1 ಕಪ್
* ಜೇನುತುಪ್ಪ ಅಥವಾ ಸಕ್ಕರೆ 2 ರಿಂದ 3 ಟೀ ಚಮಚ
* ನಿಂಬೆರಸ 1 ಟೀ ಚಮಚ
* ಶುಂಠಿ ಒಂದಿಂಚು
* ಐಸ್‌ಕ್ಯೂಬ್ ಸ್ವಲ್ಪ
       
 ತಯಾರಿಸುವ ವಿಧಾನ:
  ಮೊದಲು ಮಿಕ್ಸಿಯಲ್ಲಿ ಅನಾನಸ್ ಹಣ್ಣು, ಜೇನುತುಪ್ಪ, ನಿಂಬೆರಸ, ಶುಂಠಿ ಇವುಗಳನ್ನು ಹಾಕು ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ಅದನ್ನು ಸೋಸಿಕೊಳ್ಳಬೇಕು. ನಂತರ ಈ ಮಿಶ್ರಣಕ್ಕೆ 1 ಕಪ್ ನೀರನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಅದಕ್ಕೆ ಐಸ್‌ಕ್ಯೂಬ್ ಅನ್ನು ಹಾಕಿದರೆ ಅನಾನಸ್ ಹಣ್ಣಿನ ಜ್ಯೂಸ್ ಸವಿಯಲು ಸಿದ್ಧ, 
 
3) ನಿಂಬೆ ಶುಂಠಿ ಜ್ಯೂಸ್:
   ತಯಾರಿಸಲು ಬೇಕಾಗುವ ಸಾಮಗ್ರಿಗಳು:
* ನಿಂಬೆಹಣ್ಣಿನ ರಸ 1/2 ಕಪ್
* ನೀರು 1 ಕಪ್
* ಸಕ್ಕರೆ 2 ಟೀ ಚಮಚ
* ಶುಂಠಿ ಒಂದಿಂಚು
* ಚಾಟ್ ಮಸಾಲೆ ಪೌಡರ್ 1/2 ಚಮಚ
* ಐಸ್‌ಕ್ಯೂಬ್ ಸ್ವಲ್ಪ
 
   ತಯಾರಿಸುವ ವಿಧಾನ:
    ಮೊದಲು ಮಿಕ್ಸಿಯಲ್ಲಿ ನಿಂಬೆರಸ, ನೀರು, ಸಕ್ಕರೆ, ಹಸಿಶುಂಠಿ ಎಲ್ಲವನ್ನೂ ಹಾಕಿ ಒಂದೆರಡು ನಿಮಿಷಗಳ ಕಾಲ ರುಬ್ಬಿಕೊಳ್ಳಬೇಕು. ನಂತರ ಈ ಮಿಶ್ರಣವನ್ನು ಸೋಸಿಕೊಳ್ಳಬೇಕು. ನಂತರ ಈ ಮಿಶ್ರಣಕ್ಕೆ 1/2 ಚಮಚ ಚಾಟ್ ಮಸಾಲೆ ಪೌಡರ್ ಅನ್ನು ಹಾಕಿ ಮಿಶ್ರಣ ಮಾಡಬೇಕು. ನಂತರ ಅದನ್ನು ಒಂದು ಗ್ಲ್ಯಾಸ್‌ನಲ್ಲಿ ಐಸ್‌ಕ್ಯೂಬ್ ಅನ್ನು ಹಾಕಿ ಈ ನಿಂಬೆ ಶುಂಠಿ ಜ್ಯೂಸ್ ಅನ್ನು ಸೇರಿಸಿದರೆ ರುಚಿಯಾದ ಮತ್ತು ದೇಹಕ್ಕೆ ಹಿತವಾದ ನಿಂಬೆ ಶುಂಠಿ ಜ್ಯೂಸ್ ಸವಿಯಲು ಸಿದ್ಧ. 
 
4) ಎಳನೀರಿನ ಜ್ಯೂಸ್:
   ತಯಾರಿಸಲು ಬೇಕಾಗುವ ಸಾಮಗ್ರಿಗಳು:
* ಎಳನೀರು 2 
* ಸಕ್ಕರೆ ರುಚಿಗೆ ತಕ್ಕಷ್ಚು
* ಶುಂಠಿ 1 ಇಂಚು
* ಪುದೀನ ಸೊಪ್ಪು ಸ್ವಲ್ಪ
* ನಿಂಬೆರಸ 1 ಟೀ ಚಮಚ
 
    ತಯಾರಿಸುವ ವಿಧಾನ:
   ಮೊದಲು ಎಳನೀರನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು ಅದರ ತಿರುಳನ್ನು ಮಿಕ್ಸಿಯಲ್ಲಿ ಹಾಕಿಕೊಳ್ಳಬೇಕು. ಅದರೊಂದಿಗೆ ಚಿಕ್ಕದಾಗಿ ಕತ್ತರಿಸಿದ ಶುಂಠಿ, ಸಕ್ಕರೆ ಮತ್ತು ಪುದೀನ ಸೊಪ್ಪನ್ನು ಹಾಕಿ ಪೇಸ್ಟ್ ಮಾಡಿಕೊಳ್ಳಬೇಕು. ನಂತರ ಈ ಮಿಶ್ರಣಕ್ಕೆ ಎಳನೀರನ್ನು ಹಾಕಿ ಒಂದು ಬಾರಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು. ನಂತರ ಅದಕ್ಕೆ ನಿಂಬೆರಸವನ್ನು ಸೇರಿಸಿ ಪುದೀನಾ ಸೋಪ್ಪಿನಿಂದ ಅಲಂಕರಿಸಿದರೆ ರುಚಿಯಾದ ಮತ್ತು ಆರೋಗ್ಯಕರವಾದ ಎಳನೀರು ಜ್ಯೂಸ್ ಕುಡಿಯಲು ಸಿದ್ಧ. 

Share this Story:

Follow Webdunia kannada

ಮುಂದಿನ ಸುದ್ದಿ

ಮೊದಲನೆಯ ರಾತ್ರಿ ಅದ್ಭುತ ರೊಮ್ಯಾನ್ಸ್ ಮಾಡಲು ಏನು ಮಾಡಬೇಕು?