Select Your Language

Notifications

webdunia
webdunia
webdunia
webdunia

ನಿಮಗಿರುವ ವಿಘ್ನಗಳು ನಿವಾರಣೆಯಾಗಲು ವರಸಿದ್ಧಿ ವಿನಾಯಕನ ವ್ರತ ಮಾಡಿ, ಗರಿಕೆಯನ್ನು ಸಮರ್ಪಿಸಿ

ನಿಮಗಿರುವ ವಿಘ್ನಗಳು ನಿವಾರಣೆಯಾಗಲು ವರಸಿದ್ಧಿ ವಿನಾಯಕನ ವ್ರತ ಮಾಡಿ, ಗರಿಕೆಯನ್ನು ಸಮರ್ಪಿಸಿ
ಬೆಂಗಳೂರು , ಗುರುವಾರ, 9 ಸೆಪ್ಟಂಬರ್ 2021 (11:30 IST)
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ದೇವರು ಒಬ್ಬನೇ ಎನ್ನುವ ಅಂಶವಿದ್ದರೂ, ಹಲವು ಹೆಸರುಗಳಿಂದ, ಹಲವು ಅವತಾರಗಳಿಂದ ಹಲವು ಆಕೃತಿಗಳಲ್ಲಿ ಭಗವಂತನನ್ನು ಪೂಜಿಸುವುದು ರೂಢಿಯಲ್ಲಿದೆ. ಅಂತಹ ನಾನಾ ಅವತಾರಗಳಲ್ಲಿ ನಾನಾ ರೂಪಗಳಲ್ಲಿ ಪೂಜಿಸಲ್ಪಡುವ ಭಗವಂತನಲ್ಲಿ ಪ್ರಥಮವಂದಿತ ಎಂದು ಹೆಸರನ್ನು ಇಟ್ಟುಕೊಂಡವನು, ಎಲ್ಲಾ ಕೆಲಸಗಳಲ್ಲಿಯೂ ಆದಿಯಲ್ಲಿ ಅಂದರೆ ಪ್ರಾರಂಭದಲ್ಲಿ ಪೂಜೆಯನ್ನು ಸ್ವೀಕರಿಸುವವನು ಶ್ರೀ ಮಹಾಗಣಪತಿ. ಆತನ ಆಕೃತಿಯೇ ಅತ್ಯಂತ ಸೊಗಸಾಗಿ ವಿಚಿತ್ರವಾಗಿಯೂ ಇರುವಂಥದ್ದು.

ಸಣ್ಣದಾದಂತಹ ಕಣ್ಣುಗಳು, ದೊಡ್ಡದಾದ ಕಿವಿ, ಉದ್ದವಾದ ಮೂಗು ಅಂದರೆ ಸೊಂಡಿಲ ಆಕೃತಿ, ಮುರಿದ ಒಂದು ಹಲ್ಲು, ಡೊಳ್ಳುಹೊಟ್ಟೆ, ಸಣ್ಣಕಾಲುಗಳು ಮತ್ತು ವಾಹನವಾಗಿ ಮೂಷಿಕ ಅಂದರೆ ಇಲಿ. ಈ ರೀತಿಯಾಗಿ ಒಂದು ವಿಶಿಷ್ಟವಾದಂತಹ ಆಕಾರದಲ್ಲಿ ಆ ಮಹಾಗಣಪತಿಯು ಪೂಜಿಸಲ್ಪಡುತ್ತಾನೆ.
ವಕ್ರತುಂಡ ಮಹಾಕಾಯ ಸೂರ್ಯಕೋಟಿಸಮಪ್ರಭ | ಅವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ || ಎನ್ನುವಂತಹ ಶ್ಲೋಕದ ವಾಕ್ಯದಂತೆ ನಾವು ಎಲ್ಲಾ ಕೆಲಸಗಳಲ್ಲಿಯೂ ಕೂಡ ಆ ಕೆಲಸಕ್ಕೆ ಬರಬಹುದಾದಂತಹ ತೊಂದರೆಗಳ ನಿವಾರಣೆಗೋಸ್ಕರ ಮತ್ತು ಅದು ಸಮಾಪ್ತಿಯಾಗಿ ಶುಭಪ್ರದವಾಗಲು ಮಹಾಗಣಪತಿಯನ್ನು ಪ್ರಾರ್ಥಿಸುತ್ತೇವೆ.
ಅಂತಹ ಮಹಾಗಣಪತಿಯನ್ನು ಪ್ರಾರ್ಥಿಸಲು ನಮಗೆ ಚತುರ್ಥಿಯು ಅತ್ಯಂತ ಮಹತ್ತರವಾದಂತಹ ತಿಥಿಯಾಗಿದೆ. ಪ್ರತಿ ತಿಂಗಳೂ ಕೂಡ ಆ ಮಾಸದ ಕೃಷ್ಣಪಕ್ಷದ ಚತುರ್ಥಿಯು ಇರುವಂತಹ ರಾತ್ರಿಯಲ್ಲಿ ಸಂಕಷ್ಟಹರ ಚತುರ್ಥೀ ವ್ರತವನ್ನು ಆಚರಿಸುವ ಪದ್ಧತಿ ಇದ್ದರೂ ಕೂಡ, ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯು ವರಸಿದ್ಧಿ ವಿನಾಯಕ ವ್ರತ ಎನ್ನುವಂತಹ, ಮಹಾಗಣಪತಿಗೆ ಸಂಬಂಧಪಟ್ಟಂತಹ ವ್ರತಕ್ಕೆ ಅತ್ಯಂತ ಪ್ರಶಸ್ತವಾದಂಥ ದಿನವಾಗಿದೆ. ಶ್ರೀ ಗಣೇಶ ಪುರಾಣದಲ್ಲಿ ಈ ವ್ರತದ ಬಗ್ಗೆ ವಿಸ್ತಾರವಾಗಿ ಹೇಳಲಾಗಿದೆ.
ಸರ್ವಶಾಸ್ತ್ರಗಳಲ್ಲಿಯೂ ಪುರಾಣಗಳಲ್ಲಿಯೂ ಜ್ಞಾನಿಯಾದಂತಹ ಸೂತಪುರಾಣಿಕರನ್ನು ಕುರಿತು ಋಷಿಗಳು ಪ್ರಶ್ನಿಸಿದರು. ಮನುಷ್ಯರಿಗೆ ಕಾರ್ಯಗಳಲ್ಲಿ ವಿಘ್ನವೂ ಒದಗಿ ಬಂದರೆ ಸಂಸಾರದಲ್ಲಿ ಅಥವಾ ಬಾಂಧವರಲ್ಲಿ ಜಗಳವಾದರೆ, ಮನಸ್ಸು ಕೆಟ್ಟ ಅಭ್ಯಾಸಗಳಿಂದ ಬಾಧಿಸಲ್ಪಟ್ಟರೆ ಅಥವಾ ವಿದ್ಯಾಭ್ಯಾಸ ವ್ಯಾಪಾರ ಕೃಷಿ ಇತ್ಯಾದಿಗಳಲ್ಲಿ ಭಯವುಂಟಾದರೆ ಶತ್ರುಗಳು ಹೆಚ್ಚಾದರೆ ಯಾವ ಆರಾಧನೆಯಿಂದ ಇವುಗಳು ಪರಿಹಾರವಾಗುತ್ತದೆ ಎಂದು.
ಆಗ ಸೂತಪುರಾಣಿಕರು ಮಹಾಭಾರತದ ಸಂದರ್ಭದಲ್ಲಿ ಅದರಲ್ಲಿಯೂ ವಿಶೇಷವಾಗಿ ಯುದ್ಧದ ಸಮಯದಲ್ಲಿ ಯುದ್ಧವು ನಿರ್ವಿಘ್ನವಾಗಿ ಸಮಾಪ್ತಿಯಾಗಿ ಜಯವು ಒದಗಿಬರಲು ಪಾಂಡವರಿಗೆ ಶ್ರೀ ಕೃಷ್ಣ ಪರಮಾತ್ಮನು ಈ ವ್ರತವನ್ನು ಕುರಿತು ಹೇಳಿದ ಈ ವರಸಿದ್ಧಿವಿನಾಯಕವ್ರತದ ಬಗ್ಗೆ ಹೇಳುತ್ತಾರೆ. ಮಾಸೇ ಭಾದ್ರಪದೇ ಶುಕ್ಲೇ ಚತುರ್ಥ್ಯಾಂ ಪೂಜಯೇನ್ನೃಪ | ಯದಾ ಚೋತ್ಪದ್ಯತೇ ಭಕ್ತಿಸ್ತದಾ ಪೂಜ್ಯೋ ಗಣಾಧಿಪಃ || ಎಂದು ಶ್ರೀಕೃಷ್ಣನು ಈ ವ್ರತದ ಬಗ್ಗೆ ಹೇಳಿದ್ದಾನೆ.
ಇನ್ನು ನಮಗೆಲ್ಲ ಗೊತ್ತಿರುವಂತೆ ಮಹಾಗಣಪತಿಯು ನೈವೇದ್ಯಪ್ರಿಯ. ನಾನಾ ವಿಧವಾದಂತಹ ಶ್ರೇಷ್ಠವಾದಂತಹ ನೈವೇದ್ಯಗಳನ್ನು ಭಕ್ಷ್ಯಗಳನ್ನು ನಾವು ಮಹಾಗಣಪತಿಗೆ ಅರ್ಪಿಸಬೇಕು. ಅದರಲ್ಲಿಯೂ ಮೋದಕಪ್ರಿಯ ಮೋದಕಹಸ್ತ ಇತ್ಯಾದಿ ಹೆಸರುಗಳನ್ನು ಗಮನಿಸಿದಾಗ ಮೋದಕವು ಎಲ್ಲ ಭಕ್ಷ್ಯಗಳಿಗಿಂತಲೂ ಅತ್ಯಂತ ಪ್ರಿಯವಾದ ಭಕ್ಷ್ಯವಾಗಿದೆ ಎಂದು ತಿಳಿಯುತ್ತದೆ. ಇದರ ಜೊತೆಗೆ ಲಡ್ಡುಕ ಅಂದರೆ ಉಂಡೆಗಳು ಗಣಪತಿಗೆ ಪ್ರಿಯ. ಮಹಾಗಣಪತಿಯ ಪೂಜೆಯ ಮಹತ್ವವನ್ನು ನಾವು ಗಮನಿಸುವುದಾದರೆ ತ್ರಿಪುರ ರಾಕ್ಷಸನ ಸಂಹಾರಕ್ಕಾಗಿ ಈಶ್ವರನೂ ಕೂಡ ಗಣಪತಿಯನ್ನು ಪ್ರಾರಂಭದಲ್ಲಿ ಪೂಜಿಸಿದ್ದಾನೆ.
ಸೀತಾದೇವಿಯನ್ನು ಕಂಡುಹಿಡಿಯಲು ಶ್ರೀರಾಮನು ಮಹಾಗಣಪತಿಯ ಅರ್ಚನೆಯನ್ನು ಮಾಡಿದ್ದಾನೆ. ಭೂಮಿಗೆ ಗಂಗೆಯನ್ನು ತಂದು ತನ್ನ ಪೂರ್ವಜರಿಗೆ ಮುಕ್ತಿಯನ್ನು ಕೊಡಲು ಭಗೀರಥನು ಪ್ರಯತ್ನಿಸುವ ಮೊದಲು ಕೂಡ ಮಹಾಗಣಪತಿಯನ್ನು ಅರ್ಚಿಸಿದ್ದಾನೆ. ದೇವಾಸುರರೆಲ್ಲರೂ ಕೂಡ ಆ ಮಹಾಗಣಪತಿಯನ್ನು ಪೂಜಿಸಿದವರೇ. ಅಮೃತವನ್ನು ಅಪಹರಿಸುವುದಕ್ಕಾಗಿಯೂ ಆ ಪಕ್ಷಿರಾಜ ಗರುಡನು ವಿಘ್ನೇಶನನ್ನು ಪೂಜೆ ಮಾಡಿದ್ದಾನೆ. ಶ್ರೀಕೃಷ್ಣನೂ ಕೂಡ ರುಕ್ಮಣಿಯ ಸಹಿತನಾಗಿ ಮಹಾಗಣಪತಿಗೆ ಪೂಜೆಯನ್ನು ನೆರವೇರಿಸಿದ್ದಾನೆ.
ಈ ರೀತಿಯಾಗಿ ಎಲ್ಲ ದೇವತೆಗಳೂ ಕೂಡ ತಮ್ಮ ಕೆಲಸದ ಸಮಾಪ್ತಿ ಗೋಸ್ಕರವಾಗಿಯೇ ಆ ಮಹಾಗಣಪತಿಯನ್ನು ಆರಾಧಿಸಿದ್ದಾರೆ. ಅಂತೆಯೇ ನಾವೂ ಕೂಡ ಮಹಾಗಣಪತಿಯನ್ನು ಶ್ರದ್ಧಾ ಭಕ್ತಿ ಪುರಸ್ಸರವಾಗಿ ಅರ್ಚಿಸೋಣ. ವಿಶೇಷವಾಗಿ ಈ ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ಥಿಯಂದು ಆ ಮಹಾಗಣಪತಿಯನ್ನು ಹಿಂದೆ ಹೇಳಿದಂತೆ ಆರಾಧಿಸಿದಾಗ ನಮ್ಮ ಎಲ್ಲ ಕಷ್ಟಗಳೂ ಕೂಡ ನಿವಾರಣೆಯಾಗಿ ನಾವು ಮಾಡುವಂತಹ ಕೆಲಸಗಳಲ್ಲಿ ನಿರ್ವಿಘ್ನತ್ತ್ವವು ಸಿದ್ಧಿಸಿ ಅದು ನಮಗೆ ಉತ್ತಮವಾದಂತಹ ಫಲವನ್ನು ಕೊಡುತ್ತದೆ.
ಇನ್ನೊಂದು ಮುಖ್ಯವಾದ ವಿಚಾರವೆಂದರೆ ಈ ದಿನ ಚಂದ್ರದರ್ಶನವನ್ನು ಮಾಡುವಂತಿಲ್ಲ. ಒಂದು ವೇಳೆ ಚಂದ್ರನನ್ನು ನೋಡಿದರೆ ಅವರಿಗೆ ಸುಳ್ಳು ಅಪವಾದಗಳು ಬರುತ್ತವೆ ಎನ್ನುವಂತಹ ಮಾತಿದೆ. ಮತ್ತು ಆ ದೋಷ ಪರಿಹಾರಕ್ಕಾಗಿ ಶ್ಯಮಂತಕೋಪಾಖ್ಯಾನ ಎನ್ನುವಂತಹ ಕಥೆಯ ಭಾಗವನ್ನು ಕೇಳಬೇಕು ಎಂದು ಉಲ್ಲೇಖಿಸಲಾಗಿದೆ. ಹಾಗಾಗಿ ನಾವು ಚಂದ್ರದರ್ಶನವನ್ನು ಮಾಡದಿರೋಣ ಮತ್ತು ಈ ದಿನದಂದು ಮಹಾಗಣಪತಿಯನ್ನು ಭಕ್ತಿಯಿಂದ ಆರಾಧಿಸಿ ಕೃತಾರ್ಥರಾಗೋಣ.


Share this Story:

Follow Webdunia kannada

ಮುಂದಿನ ಸುದ್ದಿ

ಸ್ವರ್ಣಗೌರಿ ವ್ರತದ ಆಚರಣೆಯ ಹಿಂದಿದೆ ಬಲವಾದ ನಂಬಿಕೆ