Select Your Language

Notifications

webdunia
webdunia
webdunia
webdunia

ನೀವು ದೀಪಾವಳಿ ಆಚರಣೆಗೆ ಸಿದ್ಧರಾದಿರಾ?

ನೀವು ದೀಪಾವಳಿ ಆಚರಣೆಗೆ ಸಿದ್ಧರಾದಿರಾ?
ಬೆಂಗಳೂರು , ಸೋಮವಾರ, 9 ಅಕ್ಟೋಬರ್ 2017 (20:36 IST)
ಆಶ್ವಯುಜ ಕೃಷ್ಣ ಚತುರ್ದಶಿಯಿಂದ ಕಾರ್ತಿಕ ಶುಕ್ಲ ಪಾಡ್ಯಮಿವರೆಗೆ ಸಾಲಂಕೃತವಾಗಿ ಬೆಳಗುವ ದೀಪಗಳು ಆಬಾಲ ವೃದ್ಧರಿಗೂ ಮುದ ನೀಡುವ ದೀಪಾವಳಿ ಹಬ್ಬಗಳಲ್ಲೆಲ್ಲಾ ಅತ್ಯಂತ ಜನಪ್ರಿಯ ಮತ್ತು ಎಲ್ಲರೂ ಆಚರಿಸುವ ದೊಡ್ಡ ಹಬ್ಬ. ಭವಿಷ್ಯೋತ್ತರ ಪುರಾಣ ಕಾಲದಲ್ಲಿ ಈ ಹಬ್ಬ ಪ್ರಸಿದ್ಧವಾಗಿತ್ತು.
ನರಕ ಚತುರ್ದಶಿ 
 
ದೀಪಾವಳಿ ಮೂರು ದಿನಗಳ ಹಬ್ಬವಾದರೂ, ದ್ವಿತೀಯ ತಿಥಿಯೂ ಸೇರಿದಂತೆ ಅದರ ಅವಧಿ ನಾಲ್ಕು ದಿನ ಆಗುತ್ತದೆ. ಇದೇ ಅಕ್ಟೋಬರ್ 25 ರಂದು ಹಬ್ಬದ ಪ್ರಾರಂಭ. ನರಕ ಚತುರ್ದಶಿ ಎನಿಸಿರುವ ಆಶ್ವಯುಜ ಕೃಷ್ಣ ಚತುರ್ದಶಿ ಈ ಹಬ್ಬದ ಮೊದಲನೆಯ ದಿನ.
 
ಆ ದಿನ ಸ್ವಾತಿ ನಕ್ಷತ್ರವಿದ್ದರೆ ಶುಭ. ಮೂಲತಃ ಮೃತ್ಯು ದೇವತೆಯೂ, ನರಕಾಧಿಪತಿಯೂ ಆದ ಯಮನನ್ನು ಪೂಜಿಸಿ, ನರಕದ ಶಿಕ್ಷೆಯಿಂದ ಪಾರುಮಾಡು ಎಂದು ಬೇಡುವ ದಿನವಾಗಿತ್ತು. ಆನಂತರ ಅದು ಶ್ರೀಕೃಷ್ಣನು ನರಕಾಸುರನನ್ನು ಸಂಹರಿಸಿದ್ದರಿಂದ ವಿಜಯೋತ್ಸವದ ದಿನವಾಯಿತು. ಆ ದಿನ ಸೂರ್ಯೋದಯಕ್ಕೆ ಮುನ್ನ ಅಭ್ಯಂಜನ ಸ್ನಾನ ಮಾಡಿ ವ್ರತಿಯು ತನ್ನ ಪಾಪಗಳ ನಾಶಕ್ಕಾಗಿ ಪ್ರಾರ್ಥಿಸಿ ಯಮದೇವನಿಗೆ ತರ್ಪಣವನ್ನರ್ಪಿಸಿ, ನರಕಾಸುರನಿಗೆ ಒಂದು ದೀಪವನ್ನು ಹಚ್ಚಬೇಕು. ಸಂಜೆ ಮನೆಯ ಎಲ್ಲಾ ಭಾಗಗಳಿಗೂ ಬೆಳಕಾಗುವಂತೆ ಸಾಲು ದೀಪಗಳಿಂದ ಅಲಂಕರಿಸಬೇಕು.
 
ಲಕ್ಷ್ಮೀ ಪೂಜೆ 
 
ಮಾರನೆ ದಿನ ಅಮಾವಾಸ್ಯೆಯನ್ನು ವರ್ಷದ ಅತ್ಯಂತ ಕತ್ತಲೆಯ ದಿನವೆಂದು ಪರಿಗಣಿಸಲಾಗಿದೆ. ಅಭ್ಯಂಜನ, ಪಿತೃಗಳಿಗೆ ತರ್ಪಣ, ಅನ್ನಸಂತರ್ಪಣೆ, ಹಗಲು ಉಪವಾಸ ಇವು ಮುಖ್ಯ ಕಾರ್ಯಗಳು. ಹಿಂದಿನ ರಾತ್ರಿಯಂತೆಯೇ ಈ ದಿನದ ರಾತ್ರಿಯಲ್ಲೂ ದೀಪಾಲಂಕರಣ ಮಾಡಬೇಕು. ವಿಶೇಷವಾಗಿ ಲಕ್ಷ್ಮೀ ಪೂಜೆ ಮಾಡುವ ದಿನ ಇದು. ವರ್ತಕರಿಗೆ ಪವಿತ್ರವಾದ ದಿನ. ತಮ್ಮ ಲೆಕ್ಕ - ಪುಸ್ತಕಗಳನ್ನು ಪೂಜಿಸಿ, ಹೊಸ ಲೆಕ್ಕಗಳನ್ನು ಪ್ರಾರಂಭಿಸುವರು. ಲಕ್ಷ್ಮೀ ಪೂಜೆ ಮಾಡಲು ಪ್ರದೋಷ ಕಾಲ ಅತ್ಯಂತ ಶುಭ, ಅಂದರೆ ಸೂರ್ಯಾಸ್ತವಾಗಿ 1 ಗಂಟೆ 36 ನಿಮಿಷಗಳವರೆಗೂ ಅಮಾವಾಸ್ಯೆ ಮುಂದುವರಿದಿರಬೇಕು. ಈ ವೇಳೆ ಲಕ್ಷ್ಮೀ ಪೂಜೆಗೆ ಅತ್ಯಂತ ಶುಭ.
 
ಬಲೀಂದ್ರ, ಗೋ ಪೂಜೆ 
 
ಮರುದಿನ ಬಲಿಪಾಡ್ಯಮಿ ಎಂದು ಕರೆಯಲ್ಪಡುವ ಕಾರ್ತಿಕ ಶುಕ್ಲ ಪಾಡ್ಯಮಿ. ಹಿಂದೂ ಪಂಚಾಂಗಗಳಲ್ಲಿ ಅತ್ಯಂತ ಪವಿತ್ರವೆನಿಸಿರುವ ಮೂರೂವರೆ ಮುಹೂರ್ತಗಳಲ್ಲಿ ಅರ್ಧ ದಿವಸದ ಮುಹೂರ್ತ. ಪ್ರಬಲನಾದ ಅಸುರ ಚಕ್ರವರ್ತಿ ಬಲಿಯನ್ನು, ವಿಷ್ಣುವು ವಾಮನಾವತಾರವನ್ನೆತ್ತಿ ಪಾತಾಳಕ್ಕೆ ತುಳಿದದ್ದು ಈ ದಿನದ ಕಥೆ.
 
ತ್ರೇತಾಯುಗದಲ್ಲಿ ಶ್ರೀರಾಮನ ಪಟ್ಟಾಭಿಷೇಕವಾಗಿದ್ದು ಇದೇ ದಿನ. ದ್ವಾಪರಾಯುಗದಲ್ಲಿ ಪಾಂಡವರು ಅಜ್ಞಾತವಾಸ ಮುಗಿಸಿ, ಕೌರವರ ಕಣ್ಣಿಗೆ ಕಾಣಿಸಿಕೊಂಡಿದ್ದು ಈ ದಿನವೇ. ಈ ದಿನ ನೀಡುವ ದಾನ ಅಕ್ಷಯ ಫಲಪ್ರದ ಎನಿಸಿದೆ. ಈ ದಿನವೇ ಪಾರ್ವತಿಯು, ಶಿವನೊಂದಿಗೆ ಪಗಡೆಯಾಟವಾಡಿ, ಶಿವನನ್ನು ಸೋಲಿಸಿದ ದಿನವಾಗಿದೆ.
 
ಬಲಿಪಾಡ್ಯಮಿ ದಿನ ಹಸು, ಎತ್ತುಗಳ ಪೂಜೆ, ಗೋವರ್ಧನ ಬೆಟ್ಟದ ಪೂಜೆ, ಕುಟುಂಬದ ಗಂಡಸರಿಗೆ, ಹೆಂಗಸರು ಮಾರ್ಗ ಪಾಲೀಕಂಕಣ ಕಟ್ಟಿ ಆರತಿ ಮಾಡುವುದು ಈ ದಿವಸದ ಮುಖ್ಯ ಕಾರ್ಯಗಳು. ಈ ದಿವಸ ವಿಕ್ರಮ ಸಂವತ್ಸರದ ಶಕ 2068 ರ ಪ್ರಾರಂಭ ದಿನ. ವಿಕ್ರಮ ಶಕೆಗೂ, ಕ್ರಿಸ್ತ ಶಕಕ್ಕೂ 57 ವರ್ಷಗಳ ವ್ಯತ್ಯಾಸವಿದೆ. ಶಾಲಿವಾಹನ ಶಕೆಗೆ 135 ವರ್ಷಗಳ ವ್ಯತ್ಯಾಸವಿರುತ್ತದೆ.
 
ಈ ದಿವಸ ವ್ಯಾಪಾರ, ಉದ್ಯೋಗ, ಅಭ್ಯಾಸ, ಗೃಹ ಪ್ರವೇಶ, ಶುಭ ಕಾರ್ಯಗಳನ್ನು ಮಾಡಬಹುದು.
 
ಯಮದ್ವಿತೀಯ ಅಥವಾ ಭ್ರಾತೃ ದ್ವಿತೀಯ 
 
ನಂತರದ ಹಬ್ಬ ಕಾರ್ತಿಕ ಶುಕ್ಲ ದ್ವಿತೀಯ ಅಥವಾ ಭ್ರಾತೃ ದ್ವಿತೀಯ ಅಥವಾ ಯಮ ದ್ವಿತೀಯ. ಪುರಾಣ ಕಥೆಯ ಪ್ರಕಾರ ಮೃತ್ಯುವಿನ ಹಾಗೂ ನರಕದ ದೇವತೆ ಯಮ ಮತ್ತು ಯಮುನಾದೇವಿ (ಯಮಿ) ಇಬ್ಬರೂ ಸೋದರ-ಸೋದರಿಯರು. ಈ ದಿವಸದಂದು ಯಮುನಾದೇವಿ ಸೋದರ ಯಮನನ್ನು ತನ್ನ ಮನೆಗೆ ಕರೆದು ಹಬ್ಬದೂಟ ಉಣಿಸಿ, ಸತ್ಕರಿಸಿದ್ದರಿಂದ, ಸೋದರ-ಸೋದರಿಯವರ ಪುನರ್ಮಿಲನಕ್ಕೆ ಶ್ರೇಷ್ಠವಾದ ದಿನವೆನಿಸಿದೆ. ಇದು ಉತ್ತರ ಭಾರತದಲ್ಲಿ ಹೆಚ್ಚಾಗಿ ಪ್ರಚಲಿತದಲ್ಲಿದೆ. ಆದ್ದರಿಂದ ಕಾರ್ತಿಕ ಶುಕ್ಲ ದ್ವಿತೀಯ ತಿಥಿಗೆ ಯಮದ್ವಿತೀಯವೆಂದು ಕರೆಯುತ್ತಾರೆ. ಇದೂ ದೀಪಾವಳಿ ಹಬ್ಬಕ್ಕೆ ಸೇರಿ ಒಟ್ಟು ನಾಲ್ಕು ದಿವಸ ಹಬ್ಬವನ್ನು ಆಚರಿಸುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬಂತು ಬಂತು 'ದೀಪಾವಳಿ' ಬಂತು...