Select Your Language

Notifications

webdunia
webdunia
webdunia
webdunia

ಕುರಿ ಕಳ್ಳತನ: ಅಡ್ಡ ಬಂದವರ ಪ್ರಾಣ ತೆಗೆಯುತ್ತಿದ್ದ ಗ್ಯಾಂಗ್ ಬಂಧನ

ಕುರಿ ಕಳ್ಳತನ: ಅಡ್ಡ ಬಂದವರ ಪ್ರಾಣ ತೆಗೆಯುತ್ತಿದ್ದ ಗ್ಯಾಂಗ್ ಬಂಧನ
ಹಾವೇರಿ , ಶನಿವಾರ, 14 ಮೇ 2022 (10:35 IST)
ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಗಂಗಾಪುರದಲ್ಲಿ ಕುರಿ ಶೆಡ್ ಮಾಲೀಕನನ್ನು ಹತ್ಯೆ ಮಾಡಿ, 35 ಆಡುಗಳನ್ನು ಕಳ್ಳತನ ಮಾಡಿದ ಪ್ರಕರಣ ಸೇರಿದಂತೆ ಒಟ್ಟು 12 ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ 7 ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೂ ಮೂವರು ತಲೆಮರೆಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದ್ದಾರೆ. 
 
ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಡೊಂಬ್ರಹಳ್ಳಿಯ ದ್ಯಾಮಪ್ಪ ಲಮಾಣಿ, ಹರಪನಹಳ್ಳಿಯ ಹನುಮಂತಪ್ಪ ಕಾಶಪ್ಪನವರ, ಮಂಜುನಾಥ ಹನುಮಂತಪ್ಪ, ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದ ಉಪೇಂದ್ರ ಯಲ್ಲಪ್ಪ ಮೋಡಿಕಾರ, ಬ್ಯಾಡಗಿ ತಾಲೂಕಿನ ಕುಂಚಿಕೊರವರ ಗ್ರಾಮದವರಾದ ಮಂಜುನಾಥ ಕುಂಚಿಕೊರವರ, ನಾಗರಾಜ ಕುಂಚಿಕೊರವರ ಹಾಗೂ ಯಲ್ಲಪ್ಪ ಎಂಬ ಏಳು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. 
 
ಗಂಗಾಪುರದಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಆರೋಪಿಗಳಲ್ಲಿ ನಾಲ್ವರನ್ನು ಬಂಧಿಸಿದ್ದು, ಮೂವರು ತಲೆಮರೆಸಿಕೊಂಡಿದ್ದಾರೆ. ಅವರನ್ನು ಶೀಘ್ರ ಬಂಧಿಸಲು ಬಲೆ ಬೀಸಲಾಗಿದೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಜೀಪ್‌, ಕಬ್ಬಿಣದ ರಾಡು, ಕಟರ್‌, ಹಗ್ಗ, ಬಿಯರ್‌ ಬಾಟಲಿಗಳು, ಕಾರದ ಪುಡಿ ಹಾಗೂ 6400 ನಗದನ್ನು ಜಪ್ತಿ ಮಾಡಿಕೊಂಡು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹೇಳಿದರು.
 
ಜಿಲ್ಲೆಯಲ್ಲಿ ಕುರಿ, ಆಡು, ಟಗರು ಕಳ್ಳತನ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ, ಆರೋಪಿಗಳ ಬಂಧನಕ್ಕೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಪೊಲೀಸ್‌ ತಂಡಗಳು ಗಸ್ತು ತಿರುಗುವ ವೇಳೆ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ತಿಳಿಸಿದರು.
 
‘ರಾತ್ರಿ ಗಸ್ತು’ ಅನ್ನು ಚುರುಕುಗೊಳಿಸಿದ ಪರಿಣಾಮ ರಟ್ಟೀಹಳ್ಳಿ ತಾಲೂಕಿನಲ್ಲಿ ಕೃಷ್ಣಮೃಗ ಬೇಟೆಯಾಡಿದ ನಾಲ್ವರು ಆರೋಪಿಗಳನ್ನು ಬಂಧಿಸಲು ಸಾಧ್ಯವಾಯಿತು. ಆಡು ಮತ್ತು ಕುರಿ ಕಳ್ಳರನ್ನು ಹಿಡಿಯಲು ಕಾರ್ಯಾಚರಣೆ ನಡೆಸಿ, ಯಶಸ್ವಿಯಾದ ರಾಣೆಬೆನ್ನೂರು ಗ್ರಾಮೀಣ ಪೊಲೀಸ್‌ ಠಾಣೆ ಸಿಬ್ಬಂದಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು. 

Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯುತ್ ಬಿಲ್ ಹೆಸರಲ್ಲಿ ಸೈಬರ್ ವಂಚನೆ: ಎಚ್ಚರ !