Publish Date: Mon, 27 May 2024 (16:26 IST)
Updated Date: Mon, 27 May 2024 (16:30 IST)
ಬೆಂಗಳೂರು: ತೆಲುಗಿನ ಜನಪ್ರಿಯ ನಟಿ ಹೇಮಾ ಅವರು ಬೆಂಗಳೂರು ನಗರದ ಹೊರ ವಲಯದ ಫಾರ್ಮ್‌ಹೌಸ್‌ನಲ್ಲಿ ನಡೆದ ರೇವ್ ಪಾರ್ಟಿಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಸಮಯ ಕೋರಿದ್ದಾರೆ.
ಅನಾರೋಗ್ಯದ ಕಾರಣ ನೀಡಿ ಹೇಮಾ ಅವರು ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಮುಂದೆ ವಿಚಾರಣೆಗೆ ಹಾಜರಾಗಲು ಏಳು ದಿನಗಳ ಕಾಲಾವಕಾಶ ಕೋರಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ರೇವ್ ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದ್ದ ಹಿನ್ನೆಲೆಯಲ್ಲಿ ನಟಿ ಹೇಮಾ ಸೇರಿದಂತೆ ಎಂಟು ಮಂದಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. ಉಳಿದವರು ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ. ಹೇಮಾ ಅವರಿಗೆ ಎರಡನೇ ಬಾರಿ ನೋಟಿಸ್ ನೀಡುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿ ಬಳಿಯ ಜಿಎಂ ಫಾರ್ಮ್‌ಹೌಸ್‌ನಲ್ಲಿ ನಡೆದ ರೇವ್ ಪಾರ್ಟಿಯ ಮೇಲೆ ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳ ದಾಳಿ ನಡೆಸಿ, ಸ್ಥಳದಿಂದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿತ್ತು.
ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದವರಿಂದ ಸಂಗ್ರಹಿಸಲಾದ 98 ರಕ್ತದ ಮಾದರಿಗಳ ಪೈಕಿ 86 ಮಂದಿ ಡ್ರಗ್ಸ್ ಸೇವಿಸಿರುವುದು ವರದಿಯಲ್ಲಿ ದೃಢಪಟ್ಟಿದೆ. 50ಕ್ಕೂ ಹೆಚ್ಚು ಪುರುಷರು ಮತ್ತು 30ಕ್ಕೂ ಹೆಚ್ಚು ಮಹಿಳೆಯರ ವರದಿ ಪಾಸಿಟಿವ್ ಬಂದಿದೆ ಎಂದು ಪೊಲೀಸ್ ಮೂಲಗಳು ದೃಢಪಡಿಸಿವೆ. ಡ್ರಗ್ಸ್ ಪೂರೈಕೆಯ ಜೊತೆಗೆ ಸೆಕ್ಸ್ ದಂಧೆ ಕೂಡ ನಡೆಯುತ್ತಿರುವ ಸಾಧ್ಯತೆಯ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.