ಇತ್ತೀಚೆಗೆ ಚಿತ್ರದುರ್ಗದಲ್ಲಿ ಸ್ಲೀಪರ್ ಬಸ್ ಗೆ ಬೆಂಕಿ ಬಿದ್ದು 7 ಜನ ಸಜೀವ ದಹನವಾಗಿದ್ದರು. ಇದಾದ ಬಳಿಕ ಸ್ಲೀಪರ್ ಬಸ್ ಅಪಾಯಕಾರಿ ಎನ್ನುವ ಮಾತುಗಳು ಕೇಳಿಬರುತ್ತಿವೆ. ಸ್ಲೀಪರ್ ಬಸ್ ನಲ್ಲಿದ್ದಾಗ ಬೆಂಕಿ ಕಾಣಿಸಿಕೊಂಡರೆ ಎಸ್ಕೇಪ್ ಆಗಲು ಏನು ಮಾಡಬೇಕು ಇಲ್ಲಿದೆ ಟಿಪ್ಸ್.
ಸ್ಲೀಪರ್ ಬಸ್ ಗಳು ಇತರೆ ಬಸ್ ಗಳಿಗೆ ಹೋಲಿಸಿದರೆ ಕಾಲು ಚಾಚಿ ಪ್ರಯಾಣ ಮಾಡಲು ಆರಾಮದಾಯಕ. ಆದರೆ ಏನಾದರೂ ಒಂದು ಅನಾಹುತವಾಗಿ ಬೆಂಕಿಯೇನಾದರೂ ಕಾಣಿಸಿಕೊಂಡಿತೋ ಈ ಬಸ್ ನಷ್ಟು ಅಪಾಯಕಾರಿ ಮತ್ತೊಂದು ಇಲ್ಲ. ಯಾಕೆಂದರೆ ಸ್ಲೀಪರ್ ಬಸ್ ಗಳ ರಚನೆಯೇ ಹಾಗಿದೆ.
ಇಲ್ಲಿ ಮಲಗಲು ಅನುಕೂಲವಾಗುವ ಸೀಟ್ ಮಾಡಲು ಬಳಸುವ ವಸ್ತುಗಳು, ಕರ್ಟನ್ ಗಳು ಬೇಗನೇ ಬೆಂಕಿ ಹತ್ತಿಕೊಳ್ಳುವಂತಹದ್ದು. ಜೊತೆಗೆ ಕಿರಿದಾದ ಜಾಗ. ಹೀಗಾಗಿ ನಿಮಗೆ ಎಸ್ಕೇಪ್ ಆಗಲೂ ಹೆಚ್ಚು ಅವಕಾಶವಿರಲ್ಲ.
-ಬೆಂಕಿ ಹತ್ತಿಕೊಂಡಾಗ ನಿಮ್ಮಲ್ಲಿ ತಪ್ಪಿಸಿಕೊಳ್ಳಲು ಕೆಲವೇ ಕೆಲವು ಸೆಕೆಂಡ್ ಮಾತ್ರ ಸಮಯಾವಕಾಶವಿರುತ್ತದೆ. ತಪ್ಪಿದರೆ ನೀವು ಹೊಗೆಯಲ್ಲೇ ಸಿಲುಕಿ ಉಸಿರುಗಟ್ಟಿ ಪ್ರಾಣ ಬಿಡುವ ಅಪಾಯವಿದೆ.
-ವಿಶೇಷವಾಗಿ ಹೊಗೆ ನಿಮ್ಮ ಬಾಯಿ ಮತ್ತು ಮೂಗಿನ ಮೂಲಕ ದೇಹ ಪ್ರವೇಶಿಸದಂತೆ ನೋಡಿಕೊಳ್ಳಬೇಕು.
-ದಟ್ಟ ಹೊಗೆಯಿದ್ದಾಗ ತಪ್ಪಿಸಿಕೊಳ್ಳಲು ಎದ್ದು ಓಡಾಡಬೇಡಿ, ಆದಷ್ಟು ತೆವಳಿಕೊಂಡು ಹೋಗಿ. ಇದರಿಂದ ಹೊಗೆಯಿಂದ ತಪ್ಪಿಸಿಕೊಳ್ಳಬಹುದು.
-ಬಸ್ ಹತ್ತುವ ಮೊದಲೇ ಎಮರ್ಜೆನ್ಸಿ ಎಕ್ಸಿಟ್ ಎಲ್ಲಿ ಬರುತ್ತದೆ ಎಂದು ನೋಡಿಕೊಳ್ಳಬೇಕು.
-ಬೆಂಕಿ ಕಾಣಿಸಿಕೊಂಡರೆ ನಿಮ್ಮ ಲಗೇಜ್ ಗಳ ಚಿಂತೆ ಬಿಟ್ಟು ಮೊದಲು ನೀವು ಎಸ್ಕೇಪ್ ಆಗುವ ಮಾರ್ಗ ಹುಡುಕಿ.
-ಕಿಟಿಕಿ ಗ್ಲಾಸ್ ತಳ್ಳಿ ಓಪನ್ ಮಾಡಲು ಸಾಧ್ಯವಾಗದೇ ಇದ್ದರೆ ಕೈಗೆ ಸಿಕ್ಕ ವಸ್ತುವಿನಿಂದ ಒಡೆಯಲು ಪ್ರಯತ್ನಿಸಿ.
-ಕೈಯಲ್ಲಿ ನೀರಿನ ಬಾಟಲಿ ಇದ್ದರೆ ಮೈಮೇಲೆ ಸುರುವಿಕೊಂಡು ಎಲ್ಲಿ ಜಾಗ ಸಿಗುತ್ತೋ ಅಲ್ಲಿಂದ ಜಿಗಿದು ಎಸ್ಕೇಪ್ ಆಗಲು ಪ್ರಯತ್ನಿಸಿ. ಬಟ್ಟೆ ಮೇಲೆ ನೀರು ಇದ್ದರೆ ಬೆಂಕಿ ಅಷ್ಟು ಬೇಗ ಮೈಗೆ ತಗುಲದು.
-ಬೆಂಕಿ ತಗುಲಿದಾಗ ವಿಪರೀತ ಗಾಬರಿಯಾದರೆ ಕೆಲವರು ಅದರಿಂದಲೇ ಹೃದಯಸ್ತಂಬನವಾಗಿ ಪ್ರಾಣ ಕಳೆದುಕೊಳ್ಳುವ ಅಪಾಯವಿರುತ್ತದೆ. ಹೀಗಾಗಿ ಎಷ್ಟು ಕೂಲ್ ಆಗಿರುತ್ತೀರೋ ಅಷ್ಟು ಕೂಲ್ ಆಗಿದ್ದುಕೊಂಡು ನಿಮ್ಮ ಜೊತೆಗೆ ಸಾಧ್ಯವಾದರೆ ಬೇರೆಯವರನ್ನೂ ಕಾಪಾಡಲು ಪ್ರಯತ್ನಿಸಿ.