ಪ್ರೆಗ್ನೆನ್ಸಿಗೆ ಟ್ರೈ ಮಾಡುತ್ತಿದ್ದರೆ ಮಹಿಳೆಯರು ಈ ಒಂದು ವಿಚಾರವನ್ನು ಗಮನಿಸಬೇಕು ಎಂದು ಖ್ಯಾತ ಸ್ತ್ರೀರೋಗ ತಜ್ಞೆ ಪದ್ಮಿನಿ ಪ್ರಸಾದ್ ಈ ಹಿಂದೊಮ್ಮೆ ಆರೋಗ್ಯ ಸಲಹೆ ಕಾರ್ಯಕ್ರಮದಲ್ಲಿ ಹೇಳಿದ್ದರು. ಇದನ್ನು ಮಹಿಳೆಯರು ತಪ್ಪದೇ ಗಮನಿಸಬೇಕು.
ಗರ್ಭಧಾರಣೆ ಎನ್ನುವುದು ಇತ್ತೀಚೆಗೆ ಮಹಿಳೆಯರಿಗೆ ಅತಿ ಪ್ರಯಾಸಕರವಾಗುತ್ತಿದೆ. ಇದಕ್ಕೆ ಅವರ ಜೀವನ ಶೈಲಿಯೇ ಪ್ರಮುಖ ಕಾರಣವಾಗುತ್ತಿದೆ. ಕೆಲಸದ ಒತ್ತಡ,ತಡವಾಗಿ ಮದುವೆ ಇತ್ಯಾದಿ ಕೂಡಾ ಗರ್ಭಧಾರಣೆ ಮೇಲೆ ಪರಿಣಾಮ ಬೀರುತ್ತದೆ.
ಅದೆಲ್ಲದಕ್ಕಿಂತ ಇಂದಿನ ಆಧುನಿಕ ಜೀವನ ಶೈಲಿಯಲ್ಲಿ ಮಹಿಳೆಯರೂ ಧೂಮಪಾನ ಮತ್ತು ಮದ್ಯಪಾನ ಮಾಡುವ ಅಭ್ಯಾಸ ಹೊಂದಿರುತ್ತಾರೆ. ಕೆಲವರಿಗಂತೂ ಇದು ಚಟವಾಗಿ ಬಿಟ್ಟಿರುತ್ತದೆ. ಒಂದು ವೇಳೆ ಮಹಿಳೆಯರಿಗೆ ಈ ಎರಡು ಅಭ್ಯಾಸಗಳಿದ್ದರೆ ಗರ್ಭಧಾರಣೆ ಸಂದರ್ಭದಲ್ಲಿ ಎಚ್ಚರಿಕೆ ವಹಿಸಬೇಕು.
ಮಹಿಳೆಯರು ಧೂಮಪಾನ, ಮದ್ಯಪಾನದ ಅಭ್ಯಾಸ ಹೊಂದಿದ್ದಲ್ಲಿ ಅವರಿಗೆ ಗರ್ಭಧಾರಣೆ ಕಷ್ಟವಾಗುತ್ತದೆ. ಗರ್ಭಿಣಿಯಾಗಿದ್ದಾಗಲೂ ಧೂಮಪಾನ, ಮದ್ಯಪಾನ ಮಾಡಿದಲ್ಲಿ ಗರ್ಭಪಾತವಾಗುವ ಅಪಾಯವಿದೆ. ಅಥವಾ ಹುಟ್ಟುವ ಮಗು ಸರಿಯಾಗಿ ಬೆಳವಣಿಗೆ ಆಗದೇ ಇರುವುದು, ಅವಧಿ ಪೂರ್ವ ಪ್ರಸವ, ಮಗುವಿನ ಬೆಳವಣಿಗೆಗೆ ಸಮಸ್ಯೆ ಇತ್ಯಾದಿ ಅಪಾಯವಿದೆ. ಹೀಗಾಗಿ ಗರ್ಭಧಾರಣೆಗೆ ಪ್ರಯತ್ನಿಸುವಾಗಲೇ ಇಂತಹ ಚಟವನ್ನು ಬಿಡುವುದು ಉತ್ತಮ. ನೇರವಾಗಿ ಅಲ್ಲದೇ ಇದ್ದರೂ ಸಂಗಾತಿಗೆ ಈ ಅಭ್ಯಾಸವಿದ್ದು ಪರೋಕ್ಷವಾಗಿ ಧೂಮಪಾನದ ಹೊಗೆ ನುಂಗುತ್ತಿದ್ದರೂ ಇಂತಹ ಅಪಾಯಗಳಿವೆ ಎಂದು ಡಾ ಪದ್ಮಿನಿ ಪ್ರಸಾದ್ ಹೇಳಿದ್ದರು.