ಲಂಡನ್: ದುರ್ಬಲ ಅಫ್ಘಾನಿಸ್ತಾನ ವಿರುದ್ಧ ಪ್ರಯಾಸಕರ ಗೆಲುವು ದಾಖಲಿಸಿದ ಬಳಿಕ ಇದೊಂದು ಅದ್ಭುತ ಗೆಲುವಾಗಿತ್ತು ಎಂದು ಟ್ವೀಟ್ ಮಾಡಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಟ್ವಿಟರಿಗರು ಟ್ರೋಲ್ ಮಾಡಿದ್ದಾರೆ.
ಅಫ್ಘಾನಿಸ್ತಾನ ವಿರುದ್ಧ ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಕಂಡಿದ್ದ ಕೊಹ್ಲಿ ಬಳಗ ಬಳಿಕ 11 ರನ್ ಗಳಿಂದ ಪ್ರಯಾಸಕರ ಗೆಲುವು ಸಾಧಿಸಿತ್ತು. ಅದೂ ಕೊನೆಯ ಓವರ್ ನಲ್ಲಿ ಮೊಹಮ್ಮದ್ ಶಮಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರಿಂದ ಗೆಲುವು ಸಾಧ್ಯವಾಗಿತ್ತು. ಈ ಗೆಲುವಿನ ಕ್ಷಣಗಳ ಫೋಟೋ ಪ್ರಕಟಿಸಿದ ಕೊಹ್ಲಿ ತಂಡದ ಪ್ರದರ್ಶನ ಕೊಂಡಾಡಿದ್ದಲ್ಲದೆ ಇದು ಅದ್ಭುತ ಗೆಲುವಾಗಿತ್ತು ಎಂದು ಟ್ವೀಟ್ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಅಭಿಮಾನಿಗಳು ಶಮಿ ಆ ಹ್ಯಾಟ್ರಿಕ್ ವಿಕೆಟ್ ಪಡೆಯದೇ ಇದ್ದಿದ್ದರೆ ಗೆಲುವು ಸಾಧ್ಯವಾಗುತ್ತಿರಲಿಲ್ಲ ಎಂಬುದನ್ನು ಮರೆಯಬೇಡಿ ಎಂದಿದ್ದಾರೆ. ಅಷ್ಟೇ ಅಲ್ಲದೆ, ಕೊನೆಯ ಓವರ್ ವರೆಗೂ ಇದು ಅಫ್ಘಾನಿಸ್ತಾನದ ಪಂದ್ಯವಾಗಿತ್ತು. ನಿಮ್ಮನ್ನು ಕಟ್ಟಿಹಾಕಲು ಅವರ ಶ್ರಮ ಮರೆಯಬೇಡಿ ಎಂದು ಎಚ್ಚರಿಸಿದ್ದಾರೆ.