ಮುಂಬೈ: ಚೀನಾ ವಸ್ತುಗಳನ್ನು ಬಹಿಷ್ಕರಿಸುವುದು, ಉತ್ಪನ್ನಗಳೊಂದಿಗಿನ ಒಪ್ಪಂದ ಕಡಿದುಕೊಳ್ಳುವುದರಿಂದ ವಿರಾಟ್ ಕೊಹ್ಲಿ, ಪಿವಿ ಸಿಂಧು ಸೇರಿದಂತೆ ದೇಶದ ಪ್ರಮುಖ ಕ್ರೀಡಾಳುಗಳ ಆದಾಯಕ್ಕೂ ಕತ್ತರಿ ಬೀಳಲಿದೆ.
ಚೀನಾ ವಿರುದ್ಧ ಭಾರತದಲ್ಲಿ ಆಕ್ರೋಶ ಹೆಚ್ಚಾಗಿದ್ದು ಅಲ್ಲಿನ ವಸ್ತುಗಳನ್ನು ಬಹಿಷ್ಕರಿಸುವ ಅಭಿಯಾನ ಹೆಚ್ಚುತ್ತಿದೆ. ಚೀನಾ ವಸ್ತುಗಳನ್ನು ಕೊಳ್ಳಲೂ ಹಲವರು ಹಿಂದೇಟು ಹಾಕುತ್ತಿದ್ದಾರೆ. ಹೀಗಿರುವಾಗ ಚೀನಾದ ಮೊಬೈಲ್ ಫೋನ್, ಶೂ, ಮತ್ತಿತರ ಪರಿಕರಗಳನ್ನು ಉತ್ಪಾದಿಸುವ ಕಂಪನಿಗಳಿಗೆ ರಾಯಭಾರಿಗಳಾಗಿರುವ ಕ್ರೀಡಾ ಪಟುಗಳು ಈಗ ಅತ್ತ ಒಪ್ಪಂದ ರದ್ದುಮಾಡಲೂ ಆಗದೇ ಇತ್ತ ಪ್ರಚಾರ ಮಾಡಲೂ ಆಗದೇ ಉಭಯ ಸಂಕಟಕ್ಕೆ ಸಿಲುಕಿದ್ದಾರೆ.
ಒಂದು ವೇಳೆ ಚೀನಾ ಮೂಲದ ಕಂಪನಿಗಳ ಉತ್ಪನ್ನಗಳಿಗೆ ಮಾಡಿಕೊಂಡಿರುವ ರಾಯಭಾರ ಒಪ್ಪಂದ ಕಡಿದುಕೊಂಡರೆ ಈ ಕ್ರೀಡಾಪಟುಗಳೆಲ್ಲಾ ಕೋಟ್ಯಾಂತರ ರೂಪಾಯಿ ಕಳೆದುಕೊಳ್ಳಬೇಕಾಗುತ್ತದೆ.