Publish Date: Tue, 23 Jun 2020 (09:33 IST)
Updated Date: Tue, 23 Jun 2020 (09:34 IST)
ಇಸ್ಲಾಮಾಬಾದ್: ಭಾರತೀಯ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಪತಿ, ಪಾಕಿಸ್ತಾನ ಕ್ರಿಕೆಟಿಗ ಶೊಯೇಬ್ ಮಲಿಕ್ ತಮ್ಮಿಬ್ಬರ ದೇಶದ ವಿಚಾರವಾಗಿ ಆಗಾಗ ಕೆದಕುವವರಿಗೆ ಉತ್ತರ ನೀಡಿದ್ದಾರೆ.
2010 ರಲ್ಲಿ ಈ ಜೋಡಿ ವಿವಾಹವಾದಾಗ ಅನೇಕರು ಹುಬ್ಬೇರಿಸಿದ್ದರು. ಯಾಕೆಂದರೆ ಭಾರತ ಮತ್ತು ಪಾಕಿಸ್ತಾನ ಸಾಂಪ್ರದಾಯಿಕ ಎದುರಾಳಿ ರಾಷ್ಟ್ರಗಳು. ಹೀಗಿರುವಾಗ ತಮ್ಮ ತಮ್ಮ ದೇಶದಲ್ಲಿ ಖ್ಯಾತರಾಗಿರುವ ಇಬ್ಬರೂ ಮದುವೆಯಾದಾಗ ಹಲವರು ಟ್ರೋಲ್ ಮಾಡಿದ್ದರು. ಈಗಲೂ ಸಾನಿಯಾ ಆಗಾಗ ಈ ವಿಚಾರಕ್ಕೆ ಟ್ರೋಲ್ ಆಗುತ್ತಲೇ ಇರುತ್ತಾರೆ.
ಇದೀಗ ಶೊಯೇಬ್ ತಮ್ಮ ಮತ್ತು ಸಾನಿಯಾ ನಡುವಿನ ಪ್ರೀತಿ ಬಗ್ಗೆ ಮಾತನಾಡಿದ್ದು, ನಾನು ರಾಜಕಾರಣಿಯಲ್ಲ. ನಮ್ಮಿಬ್ಬರ ನಡುವೆ ಪ್ರೀತಿ ಮಾತ್ರವಿದೆ. ಮದುವೆಯಾಗಲು ಅಷ್ಟು ಸಾಕು. ನಾವು ಯಾವ ರಾಷ್ಟ್ರಕ್ಕೆ ಸೇರಿದವರು ನಮ್ಮ ರಾಷ್ಟ್ರದ ನಡುವೆ ಶತ್ರುತ್ವವಿದೆ ಎನ್ನುವುದು ಮುಖ್ಯವಲ್ಲ ಎಂದು ಶೊಯೇಬ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.