Publish Date: Wed, 22 Aug 2018 (09:24 IST)
Updated Date: Wed, 22 Aug 2018 (09:25 IST)
ಟ್ರೆಂಟ್ ಬ್ರಿಡ್ಜ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಪ್ರಸಕ್ತ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ಅಭಿಮಾನಿಗಳು ಭಾರತೀಯರನ್ನು ಕೆಣಕುತ್ತಲೇ ಇದ್ದಾರೆ. ಆದರೆ ಈ ಬಾರಿ ಅವರಿಗೆ ತಕ್ಕ ಉತ್ತರವೇ ಸಿಕ್ಕಿದೆ.
ಎರಡು ಟೆಸ್ಟ್ ಪಂದ್ಯಗಳಲ್ಲಿ ಸೋತ ಬಳಿಕ ಟೀಂ ಇಂಡಿಯಾ ಅಭಿಮಾನಿಗಳನ್ನು, ಆಟಗಾರರನ್ನು ಇಂಗ್ಲೆಂಡ್ ಅಭಿಮಾನಿಗಳು ಅವಕಾಶ ಸಿಕ್ಕಾಗಲೆಲ್ಲಾ ಮೂದಲಿಸುತ್ತಿದ್ದಾರೆ. ಆದರೆ ತೃತೀಯ ಟೆಸ್ಟ್ ಪಂದ್ಯದಲ್ಲಿ ತಮ್ಮನ್ನು ಮೂದಲಿಸಲು ಹೋದ ಇಂಗ್ಲೆಂಡ್ ಅಭಿಮಾನಿಗಳಿಗೆ ಕೆಎಲ್ ರಾಹುಲ್ ತಕ್ಕ ಉತ್ತರವನ್ನೇ ಕೊಟ್ಟಿದ್ದಾರೆ.
ಇಂಗ್ಲೆಂಡ್ ಮೊದಲ ಇನಿಂಗ್ಸ್ ನಲ್ಲಿ ನಾಯಕ ಜೋ ರೂಟ್ ನೀಡಿದ ಕ್ಯಾಚ್ ನ್ನು ರಾಹುಲ್ ಅದ್ಭುತವಾಗಿ ಹಿಡಿದಿದ್ದರು. ಆದರೆ ಇದು ಕ್ಯಾಚ್ ಆಗಿದೆಯೋ, ನೆಲಕ್ಕೆ ತಾಗಿದೆಯೋ ಎಂಬ ಬಗ್ಗೆ ಮೊದಲು ಅನುಮಾನವಿತ್ತು. ಹೀಗಾಗಿ ನಿರ್ಣಯ ಥರ್ಡ್ ಅಂಪಾಯರ್ ಗೆ ಹೋಗಿತ್ತು.
ಈ ಸಂದರ್ಭದಲ್ಲಿ ಇಂಗ್ಲೆಂಡ್ ಅಭಿಮಾನಿಗಳು ರಾಹುಲ್ ರನ್ನು ವಿಚಿತ್ರವಾಗಿ ಶಬ್ಧ ಮಾಡಿ ಕೆಣಕಿದ್ದರು. ಆಗ ಸುಮ್ಮನಿದ್ದ ರಾಹುಲ್ ಕೆಲವೇ ಕ್ಷಣಗಳಲ್ಲಿ ಬೆನ್ ಸ್ಟೋಕ್ಸ್ ನೀಡಿದ ಸುಲಭ ಕ್ಯಾಚ್ ಹಿಡಿದು ಸಂಭ್ರಮಿಸಿದರು. ಅಲ್ಲದೆ, ಇಂಗ್ಲೆಂಡ್ ಅಭಿಮಾನಿಗಳತ್ತ ನೋಡಿ ತಮ್ಮ ಕಿವಿ ಮೇಲೆ ಕೈ ಇಟ್ಟುಕೊಂಡು ಈಗ ಯಾಕೆ ನಿಮ್ಮ ಸದ್ದು ಕೇಳಿಸುತ್ತಿಲ್ಲ ಎಂಬ ರೀತಿ ಸನ್ನೆ ಮಾಡಿ ತಿರುಗೇಟು ಕೊಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.