Publish Date: Sat, 09 Sep 2017 (11:06 IST)
Updated Date: Sat, 09 Sep 2017 (11:09 IST)
ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಗೆ ಎಷ್ಟೋ ಆರಾಧಕರಿದ್ದಾರೆ. ಆದರೆ ಈ ಆರು ವರ್ಷದ ಬಾಲಕಿ ಬರೆದ ಪತ್ರ ಮಾತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಚಿನ್ ತೆಂಡುಲ್ಕರ್ ಜೀವನಾಧಾರಿತ ಚಿತ್ರ ‘ಸಚಿನ್ ಎ ಬಿಲಿಯನ್ ಡ್ರೀಮ್ಸ್’ ನೋಡಿದ ಬಳಿಕ 6 ವರ್ಷದ ಬಾಲಕಿ ತಾರಾ ಸಚಿನ್ ಗೆ ಮೆಚ್ಚಿ ಪತ್ರ ಬರೆದಿದ್ದಾಳೆ. ಅದನ್ನು ಸಚಿನ್ ತಮ್ಮ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿದ್ದಾರೆ.
‘ನಾನು ತಾರಾ (ಸಾರಾ ಅಕ್ಕನ ಹಾಗೆ) ಆದರೆ ನನಗೆ ಆರು ವರ್ಷವಷ್ಟೆ. ನಾನು ಇತ್ತೀಚೆಗಷ್ಟೇ ನಿಮ್ಮ ಸಿನಿಮಾ ನೋಡಿದೆ ಮತ್ತು ಇಷ್ಟಪಟ್ಟೆ. ನಿಮ್ಮ ಬಾಲ್ಯದ ತುಂಟಾಟ ನೋಡಿ ನಗು ಬಂತು. ಕೊನೆಯ ಪಂದ್ಯವನ್ನು ನೋಡಿದಾಗ ಕಣ್ಣೀರು ಬಂತು. ನಾನು ಒಮ್ಮೆ ನಿಮ್ಮನ್ನು, ಸಾರಾ ಅಕ್ಕನನ್ನು, ಅರ್ಜುನ್ ಅಣ್ಣನನ್ನು ನೋಡಲು ಹಾಗೂ ಅಂಜಲಿ ಆಂಟಿಯನ್ನು ನೋಡಲು ಬಯಸುತ್ತೇನೆ. ಅವಕಾಶ ಕೊಡ್ತೀರಾ?’ ಎಂದು ಪುಟ್ಟ ಬಾಲಕಿ ಪತ್ರದಲ್ಲಿ ಹೇಳಿಕೊಂಡಿದ್ದಾಳೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸಚಿನ್ ‘ನಿನ್ನ ಪತ್ರ ನಂಗೆ ತುಂಬಾ ಇಷ್ಟವಾಯಿತು. ನನಗೆ ಪತ್ರ ಬರೆದಿದ್ದಕ್ಕೆ ಧನ್ಯವಾದಗಳು. ಹೀಗೇ ನಗುತ್ತಿರು’ ಎಂದು ಹರಸಿದ್ದಾರೆ. ಇದನ್ನು ಟ್ವಿಟರಿಗರು ಭಾರೀ ಇಷ್ಟಪಟ್ಟಿದ್ದಾರೆ.