ದಿ ಓವಲ್: ಅನುಭವ, ಕ್ಲಾಸ್ ಎನ್ನುವುದು ಕ್ರಿಕೆಟ್ ನಲ್ಲಿ ಯಾವತ್ತಿಗೂ ಹೊಳಪು ಕಳೆದುಕೊಳ್ಳುವುದಿಲ್ಲ ಎನ್ನುವುದನ್ನು ಅಜಿಂಕ್ಯಾ ರೆಹಾನೆ ಸಾಬೀತುಪಡಿಸಿದರು.
ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕನಾಗಿ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿ ಗೆಲ್ಲಿಸಿಕೊಟ್ಟಿದ್ದ ರೆಹಾನೆಗೆ ಬಳಿಕ ಫಾರ್ಮ್ ಕೊರತೆಯಿಂದ ತಂಡದಲ್ಲಿ ಸ್ಥಾನವೇ ಇಲ್ಲವಾಯಿತು. ಆದರೆ ದೇಶೀಯ ಕ್ರಿಕೆಟ್ ಮತ್ತು ಐಪಿಎಲ್ ನಲ್ಲಿ ರನ್ ಗಳಿಸಿದ ರೆಹಾನೆ ತಂಡಕ್ಕೆ ವಾಪಸ್ ಆದರು.
ಆಸ್ಟ್ರೇಲಿಯಾ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಅವರು ಇಂದು ಆಡಿ 89 ರನ್ ಗಳ ಇನಿಂಗ್ಸ್ ಯಾವ ಶತಕ, ದ್ವಿಶತಕದ ಇನಿಂಗ್ಸ್ ಗೂ ಕಮ್ಮಿಯಿಲ್ಲ. ಒಂದು ವೇಳೆ ರೆಹಾನೆ ಇಂದು ನಿಂತು ಆಡದೇ ಹೋಗಿದ್ದರೆ ಟೀಂ ಇಂಡಿಯಾ ಫಾಲೋ ಆನ್ ಅವಮಾನಕ್ಕೀಡಾಗಬೇಕಾಗಿತ್ತು. ಡಬ್ಲ್ಯುಟಿಸಿ ಫೈನಲ್ ನಲ್ಲಿ ಭಾರತ ಇದು ಎರಡನೇ ಬಾರಿಗೆ ಆಡುತ್ತಿದ್ದರೂ ಭಾರತೀಯ ಆಟಗಾರನೊಬ್ಬ ಗಳಿಸಿದ ಮೊದಲ ಅರ್ಧಶತಕ ಎಂಬ ಗೌರವ ಅವರದ್ದಾಯಿತು. ಅಲ್ಲದೆ ಟೆಸ್ಟ್ ಕ್ರಿಕೆಟ್ ನಲ್ಲಿ 5 ಸಾವಿರ ಪ್ಲಸ್ ರನ್ ಗಳಿಸಿ 13 ನೇ ಭಾರತೀಯ ಆಟಗಾರನಾದರು.
ಆದರೆ ಇಲ್ಲಿಗೇ ಭಾರತ ಅಪಾಯದಿಂದ ಪಾರಾಗಿದೆ ಎಂದಲ್ಲ. ಟೀಂ ಇಂಡಿಯಾ ಈಗಲೂ ಸೋಲಿನ ಸುಳಿಯಲ್ಲೇ ಇದೆ. ಮೊದಲ ಇನಿಂಗ್ಸ್ ನಲ್ಲಿ 296 ರನ್ ಗಳಿಗೆ ಆಲೌಟ್ ಆದ ಟೀಂ ಇಂಡಿಯಾ 173 ರನ್ ಗಳ ಹಿನ್ನಡೆ ಅನುಭವಿಸಿತು. ಇದೀಗ ಎರಡನೇ ಇನಿಂಗ್ಸ್ ಆರಂಭಿಸಿರುವ ಆಸೀಸ್ 2 ವಿಕೆಟ್ ನಷ್ಟಕ್ಕೆ 36 ರನ್ ಗಳಿಸಿದೆ. ಆದರೆ ಪಂದ್ಯದಲ್ಲಿ ಇನ್ನೂ ಎರಡು ಪೂರ್ತಿ ದಿನ ಮತ್ತು ಇಂದು 40 ಓವರ್ ಗಳ ಆಟ ಬಾಕಿಯಿದೆ. ಹೀಗಾಗಿ ಭಾರತಕ್ಕೆ ಕನಿಷ್ಠ ಡ್ರಾ ಮಾಡಿಕೊಳ್ಳುವುದೂ ಸುಲಭದ ಮಾತಲ್ಲ.