Publish Date: Thu, 29 Jan 2026 (21:25 IST)
Updated Date: Thu, 29 Jan 2026 (21:27 IST)
ವಡೋದರಾ: ಡಬ್ಲ್ಯುಪಿಎಲ್ 2026 ರ ಇಂದಿನ ಪಂದ್ಯದಲ್ಲಿ ಆರ್ ಸಿಬಿಗೆ ಮತ್ತೆ ಆಪತ್ಬಾಂಧವರಾದ ನಡಿನ್ ಡಿ ಕ್ಲರ್ಕ್ ಎದುರಾಳಿ ಯುಪಿ ವಾರಿಯರ್ಸ್ ನ್ನು 20 ಓವರ್ ಗಳಲ್ಲಿ 143 ರನ್ ಗೆ ಕಟ್ಟಿ ಹಾಕಲು ಯಶಸ್ವಿಯಾಗಿದೆ.
ಕಳೆದ ಎರಡು ಪಂದ್ಯಗಳನ್ನು ಸತತವಾಗಿ ಸೋತಿರುವ ಆರ್ ಸಿಬಿ ಇಂದು ಗೆದ್ದು ನೇರವಾಗಿ ಫೈನಲ್ ಗೇರುವ ಕನಸಿನಲ್ಲಿದೆ.ಇಂದು ಟಾಸ್ ಗೆದ್ದ ಆರ್ ಸಿಬಿ ಮೊದಲು ಯುಪಿಗೆ ಬ್ಯಾಟಿಂಗ್ ಮಾಡಲು ಹೇಳಿತು. ಟಾಪ್ ಆರ್ಡರ್ ಬ್ಯಾಟಿಗರು ಯುಪಿಗೆ ಉತ್ತಮ ಆರಂಭ ನೀಡಿದರು. ನಾಯಕಿ ಮೆಗ್ ಲ್ಯಾನಿಂಗ್ 41, ದೀಪ್ತಿ ಶರ್ಮಾ 55 ರನ್ ಗಳಿಸಿ ಔಟಾದರು.
ಇವರಿಬ್ಬರೂ ಬ್ಯಾಟಿಂಗ್ ಮಾಡುವಾಗ 200 ರನ್ ಗಳ ಗುರಿ ದಾಟಬಹುದು ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ನಡಿನ್ ಬೌಲಿಂಗ್ ಗಿಳಿಯುತ್ತಿದ್ದಂತೇ ಪಂದ್ಯದ ಚಿತ್ರಣ ಬದಲಾಯ್ತು. 4 ವಿಕೆಟ್ ಕಬಳಿಸಿದ ನಡಿನ್ ಎದುರಾಳಿಗಳ ರನ್ ಓಟಕ್ಕೆ ಕಡಿವಾಣ ಹಾಕಿದರು. ಗ್ರೇಸ್ ಹ್ಯಾರಿಸ್ 2, ಲಾರೆನ್ ಬೆಲ್, ಶ್ರೇಯಾಂಕ ಪಾಟೀಲ್ ತಲಾ 1 ವಿಕೆಟ್ ಕಬಳಿಸಿದರು. ಅಂತಿಮವಾಗಿ ಯುಪಿ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಿತು.