Publish Date: Fri, 20 Feb 2026 (13:49 IST)
Updated Date: Fri, 20 Feb 2026 (13:51 IST)
ಅಹ್ಮದಾಬಾದ್: ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಸೂಪರ್ 8 ರ ಹಂತದ ಪಂದ್ಯಗಳನ್ನು ಆಡಲು ಸಜ್ಜಾಗಿದೆ. ಆದರೆ ಅಂತಿಮ ಘಟ್ಟದ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಈ ಪ್ರಮುಖ ಬ್ಯಾಟಿಗನನ್ನೇ ಕಿತ್ತು ಹಾಕಲಾಗುತ್ತಾ ಎಂಬ ಪ್ರಶ್ನೆ ಮೂಡಿದೆ.
ಲೀಗ್ ಹಂತದ ಪಂದ್ಯಗಳಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಪಡೆದಿತ್ತು. ಇದೀಗ ಫೆಬ್ರವರಿ 22 ರಿಂದ ಸೂಪರ್ 8 ಹಂತದ ಪಂದ್ಯವನ್ನು ಆಡಲಿದೆ. ಸೂಪರ್ 8 ರ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ, ಎರಡನೇ ಪಂದ್ಯದಲ್ಲಿ ಜಿಂಬಾಬ್ವೆ ಮತ್ತು ಮೂರನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಆಡಬೇಕಿದೆ.
ಲೀಗ್ ಹಂತದಲ್ಲಿ ಭಾರತಕ್ಕೆ ದೊಡ್ಡ ತಲೆನೋವಾಗಿದ್ದು ಅಭಿಷೇಕ್ ಶರ್ಮಾ. ಮೂರು ಪಂದ್ಯ ಆಡಿದ್ದ ಅವರು ಮೂರೂ ಪಂದ್ಯಗಳಲ್ಲಿ ಶೂನ್ಯ ಸಂಪಾದಿಸಿದ್ದಾರೆ. ಅಭಿಷೇಕ್ ಸಿಡಿಯದೇ ಭಾರತ ಉತ್ತಮ ಆರಂಭ ಪಡೆಯುತ್ತಿಲ್ಲ. ಅಂತಿಮ ಹಂತದ ಪಂದ್ಯಗಳಲ್ಲಿ ಪ್ರಬಲ ತಂಡಗಳು ಎದುರಾಗಲಿದ್ದು, ಆಗ ಬ್ಯಾಟಿಂಗ್ ಬಲವಾಗಬೇಕು.
ಹೀಗಾಗಿ ಅಭಿಷೇಕ್ ಶರ್ಮಾ ಬದಲಿಗೆ ಸಂಜು ಸ್ಯಾಮ್ಸನ್ ಗೆ ಮತ್ತೆ ಅವಕಾಶ ಸಿಗಬಹುದೇ ಎಂಬ ಪ್ರಶ್ನೆ ಮೂಡಿದೆ. ಹಾಗಿದ್ದರೂ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯಕ್ಕೆ ಅಭಿಷೇಕ್ ಗೆ ಮತ್ತೊಂದು ಅವಕಾಶ ಸಿಗಬಹುದು. ಅಲ್ಲೂ ಅವರು ವಿಫಲರಾದರೆ ಜಿಂಬಾಬ್ವೆ ವಿರುದ್ಧ ಭಾರತ ಆರಂಭಿಕರನ್ನು ಬದಲಾಯಿಸಿದರೂ ಅಚ್ಚರಿಯಿಲ್ಲ.