Publish Date: Wed, 15 Nov 2023 (17:21 IST)
Updated Date: Wed, 15 Nov 2023 (17:23 IST)
ಮುಂಬೈ: ನ್ಯೂಜಿಲೆಂಡ್ ವಿರುದ್ಧ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ರನ್ ಮೆಷಿನ್ ವಿರಾಟ್ ಕೊಹ್ಲಿ ವಿಶ್ವ ದಾಖಲೆಯ 50 ನೇ ಶತಕ ಸಿಡಿಸಿದ್ದಾರೆ.
ಈ ಮೂಲಕ ಏಕದಿನ ಪಂದ್ಯಗಳಲ್ಲಿ ಗರಿಷ್ಠ ಶತಕ ದಾಖಲಿಸಿದ ಸಚಿನ್ ತೆಂಡುಲ್ಕರ್ ಅವರ ವಿಶ್ವ ದಾಖಲೆಯನ್ನು ಮುರಿದಿದ್ದಾರೆ. ವಿಶೇಷವೆಂದರೆ ಸಚಿನ್ ಎದುರಲ್ಲೇ ಅವರ ದಾಖಲೆಯನ್ನು ಮುರಿದು ಅವರಿಗೆ ತಲೆಬಾಗಿ ವಂದಿಸಿದ್ದಾರೆ.
ಫರ್ಗ್ಯುಸನ್ ಎಸೆತದಲ್ಲಿ ಡೀಪ್ ಬ್ಯಾಕ್ ವರ್ಡ್ ಸ್ಕ್ವೇರ್ ಲೆಗ್ ಕಡೆಗೆ ಚೆಂಡು ತಳ್ಳಿ ಎರಡು ರನ್ ಕದಿಯುತ್ತಿದ್ದಂತೇ ಕೊಹ್ಲಿ ವಿಶ್ವ ದಾಖಲೆ ನಿರ್ಮಾಣ ಮಾಡಿದರು. ಶತಕ ಗಳಿಸುತ್ತಿದ್ದಂತೇ ಬ್ಯಾಟ್ ಕೆಳಗೆ ಹಾಕಿ ಮಂಡಿಯೂರಿ ಕುಳಿತು ಸಂಭ್ರಮಿಸಿದ ಕೊಹ್ಲಿ ಬಳಿಕ ಗ್ಲೌಸ್ ಕೆಳಗಿಟ್ಟು ಗ್ಯಾಲರಿಯಲ್ಲಿ ಕೂತಿದ್ದ ತಮ್ಮ ಮೆಚ್ಚಿನ ಕ್ರಿಕೆಟಿಗ ಸಚಿನ್ ಕಡೆಗೆ ತಲೆಬಾಗಿ ವಂದಿಸಿದರು. ಬಳಿಕ ಗ್ಯಾಲರಿಯಲ್ಲಿ ಕೂತು ಚಿಯರ್ ಮಾಡುತ್ತಿದ್ದ ಪತ್ನಿ ಅನುಷ್ಕಾ ಕಡೆಗೆ ಸಿಹಿ ಮುತ್ತಿನ ವಿನಿಮಯ ಮಾಡಿ ಸಂಭ್ರಮಿಸಿದರು. ಈ ಕ್ಷಣಕ್ಕೆ ಇಡೀ ಕ್ರೀಡಾಂಗಣವೇ ಎದ್ದು ನಿಂತು ಕೊಹ್ಲಿಗೆ ಅಭಿನಂದನೆ ಸಲ್ಲಿಸಿತು.