Select Your Language

Notifications

webdunia
webdunia
webdunia
webdunia

ವಿರಾಟ್ ಆಕ್ರಮಣಕಾರಿ ಮನೋಭಾವವನ್ನು ಕಡಿಮೆ ಮಾಡಿಕೊಳ್ಳಲಿ - ಜಾಕ್ ಕಾಲಿಸ್

ವಿರಾಟ್  ಆಕ್ರಮಣಕಾರಿ ಮನೋಭಾವವನ್ನು ಕಡಿಮೆ ಮಾಡಿಕೊಳ್ಳಲಿ - ಜಾಕ್ ಕಾಲಿಸ್

ನಾಗಶ್ರೀ ಭಟ್

ಬೆಂಗಳೂರು , ಶುಕ್ರವಾರ, 16 ಫೆಬ್ರವರಿ 2018 (16:31 IST)
ವಿರಾಟ್ ಕ್ರಿಕೆಟ್ ಮೈದಾನದಲ್ಲಿ ತಮ್ಮ ಬ್ಯಾಟಿಂಗ್‌ನಂತೆಯೇ ಆಕ್ರಮಣಶೀಲತೆಗೂ ಸಹ ಹೆಸರುವಾಸಿಯಾಗಿದ್ದಾರೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ 4 ನೇ ಏಕದಿನ ಪಂದ್ಯದಲ್ಲಿ ವಿರಾಟ್ ಸ್ವಲ್ಪ ಜಾಸ್ತಿ ಎನ್ನುವಂತೆಯೇ ತಮ್ಮ ಆಕ್ರಮಣಕಾರಿ ಮನೋಭಾವವನ್ನು ಪ್ರದರ್ಶಿಸಿದ್ದು ಅನೇಕರಲ್ಲಿ ಅಸಮಾಧಾನವನ್ನುಂಟುಮಾಡಿತ್ತು.

ಆದರೆ ಹಲವು ಕ್ರಿಕೆಟ್ ಪರಿಣಿತರ ಪ್ರಕಾರ ಆಕ್ರಮಣ ಶೀಲತೆ ವಿರಾಟ್ ಕೊಹ್ಲಿಯ ಶಕ್ತಿಯಾಗಿದ್ದು ಸ್ಥಿಮಿತದಲ್ಲಿರುವ ಆಕ್ರಮಣಶೀಲತೆ ಒಳ್ಳೆಯದು ಎಂದು ಅಭಿಪ್ರಾಯಪಟ್ಟಿದ್ದಾರೆ.
 
"ವಿರಾಟ್ ತಮ್ಮ ಆಕ್ರಮಣಶೀಲತೆಯಿಂದ ಅಧಿಕ ರನ್‌ ಗಳಿಸಲು ಪ್ರಯತ್ನಿಸುತ್ತಾರೆ ಮತ್ತು ಅವರು ಇದರಲ್ಲಿ ಯಶಸ್ವಿಯೂ ಆಗಿದ್ದಾರೆ, ಹೀಗಿದ್ದೂ ಸಹ ಕೊಹ್ಲಿ ತಮ್ಮ ಆಕ್ರಮಣಕಾರಿ ಮನೋಭಾವವನ್ನು ನಿಯಂತ್ರಿಸಿಕೊಳ್ಳಬೇಕು. ವಿರಾಟ್ ತಮಗೆ ಸಹಾಯ ಮಾಡುವ ಈ ಆಕ್ರಮಣಕಾರಿ ಮನೋಭಾವ ತಂಡದ ಇತರ ಆಟಗಾರರಿಗೂ ಸಹಾಯ ಮಾಡುತ್ತದೆಯೇ ಎನ್ನುವುದನ್ನು ನಿರ್ಧರಿಸಬೇಕಿದೆ. ಮೊದಲಿನಿಂದಲೂ ಕೊಹ್ಲಿ ಆಕ್ರಮಣಕಾರಿ ಮನೋಭಾವವನ್ನು ಹೊಂದಿದ್ದು ಇದು ಬ್ಯಾಟಿಂಗ್ ಮಾಡುವಾಗ ಉತ್ತಮವಾಗಿ ರನ್ ಗಳಿಸಲು ನೆರವಾಗುತ್ತದೆ. ಆದರೆ ನಾಯಕನಾಗಿ ತಂಡವನ್ನು ಮುನ್ನಡೆಸುವಾಗ ಇದನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳುವುದು ಉತ್ತಮ" ಎಂದು ಜಗತ್ತು ಕಂಡ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿದ್ದ ಜಾಕ್ ಕಾಲಿಸ್ ಅಭಿಪ್ರಾಯಪಟ್ಟಿದ್ದಾರೆ.
 
ಕಾಲಿಸ್ ಆಟದೆಡೆಗಿನ ಕೊಹ್ಲಿಯ ಆಸಕ್ತಿಯನ್ನು ಮೆಚ್ಚಿಕೊಂಡರು, ಆದರೆ "ಕೊಹ್ಲಿಯಂತೆ ಯಾವಾಗಲೂ ಆಕ್ರಮಣಕಾರಿಯಾಗಿರುವ ಅಗತ್ಯವಿಲ್ಲ. ಇನ್ನು ಸ್ವಲ್ಪ ವಯಸ್ಸಾದಂತೆ ಕೊಹ್ಲಿಯ ಆಕ್ರಮಣಶೀಲತೆಯೂ ಸಹ ಶಾಂತವಾಗುತ್ತದೆ ಎಂದು ನಾನು ಖಚಿತವಾಗಿ ಹೇಳುತ್ತೇನೆ" ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
 
ಪ್ರಸ್ತುತ ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಪಂದ್ಯಗಳ ಕುರಿತು ಮಾತನಾಡಿದ ಕಾಲಿಸ್ "ಭಾರತ ತನ್ನ ವಿದೇಶ ಪ್ರವಾಸದ ರೆಕಾರ್ಡ್‌ಗಳನ್ನು ಸುಧಾರಿಸುವ ಮಾರ್ಗವನ್ನು ಕಂಡುಕೊಳ್ಳಬೇಕಾಗಿದೆ. ವಿಶೇಷವಾಗಿ ಭಾರತದ ಸದಸ್ಯರು ಬೌಲರ್‌ಗಳಿಗೆ ಹೆಚ್ಚು ಸಹಾಯ ಮಾಡುವ ವಿಕೆಟ್‌ಗಳ ಮೇಲೆ ಸುಧಾರಿಸಬೇಕಿದೆ. ಇತ್ತೀಚೆಗೆ ನಡೆಯುತ್ತಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದಲ್ಲಿ ಸುಧಾರಣೆಗಳು ಕಾಣಿಸುತ್ತಿದೆ. ಈ ಸರಣಿ ಭಾರತದ ತಂಡಕ್ಕೆ ಹಲವು ಮುಖ್ಯ ಪಾಠಗಳನ್ನು ಕಲಿಸಲಿದೆ ಎಂದು ನಾನು ನಂಬಿದ್ದೇನೆ. ಬೌಲರ್‌ಗಳು ಉತ್ತಮ ಪ್ರದರ್ಶನವನ್ನು ತೋರುತ್ತಿದ್ದು ತಮ್ಮ ಹಿಂದಿನ ಪ್ರವಾಸಗಳಲ್ಲಾದ ತಪ್ಪುಗಳಿಂದ ಪಾಠವನ್ನು ಕಲಿತು ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ" ಎಂದು ಸೇಂಟ್ ಮೊರಿಟ್ಜ್ ಐಸ್ ಕ್ರಿಕೆಟ್ ಈವೆಂಟ್‌ನ ಸುದ್ದಿಯಲ್ಲಿ ಮಾತನಾಡಿದ ಕಾಲಿಸ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
 
ಪ್ರಸ್ತುತ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಭಾರತ ಮೊದಲು ಟೆಸ್ಟ್ ಸರಣಿಯಲ್ಲಿ 2-1 ಅಂತರದಲ್ಲಿ ಸೋತರೂ ಇನ್ನೂ ಒಂದು ಪಂದ್ಯ ಬಾಕಿಯಿರುವಂತೆಯೇ ಏಕದಿನ ಪಂದ್ಯಗಳಲ್ಲಿ 4-1 ಅಂತರದಲ್ಲಿ ಸರಣಿಯನ್ನು ತನ್ನದಾಗಿಸಿಕೊಂಡಿದೆ. 25 ವರ್ಷಗಳ ನಂತರ ದಕ್ಷಿಣ ಆಫ್ರಿಕಾದಲ್ಲಿ ವಿರಾಟ್ ಬಳಗ ಏಕದಿನ ಸರಣಿಯನ್ನು ಗೆದ್ದ ಮೇಲೆ ಪಂದ್ಯಗಳಲ್ಲಿ ವಿರಾಟ್ ತೋರುವ ಆಕ್ರಮಣಕಾರಿ ಮನೋಭಾವ ತಂಡದ ಗೆಲುವಿಗೆ ಕಾರಣವಾಗಿದೆ. ಅದು ಒಳ್ಳೆಯದೇ ಎನ್ನುತ್ತಿದ್ದಾರೆ ಕೊಹ್ಲಿಯ ಅಭಿಮಾನಿಗಳು.

Share this Story:

Follow Webdunia kannada

ಮುಂದಿನ ಸುದ್ದಿ

ದಾಖಲೆಯ ಹೊಸ್ತಿಲಲ್ಲಿ ಧೋನಿ!