ಮುಂಬೈ: ಐಪಿಎಲ್ ಜಾತ್ರೆ ಮುಗಿದು ಇನ್ನೇನು ಟಿ20 ವಿಶ್ವಕಪ್ ಆರಂಭವಾಗಲು ಕೆಲವೇ ದಿನಗಳು ಬಾಕಿಯಿದೆ. ಇದಕ್ಕೆ ಮೊದಲು ಟಿ20 ವಿಶ್ವಕಪ್ ನಲ್ಲಿ ವಿರಾಟ್ ಕೊಹ್ಲಿ ದಾಖಲೆಗಳೇನು, ಅವರು ಗಳಿಸಿದ ರನ್ ಎಷ್ಟು ಎಂಬ ವಿವರ ನೋಡೋಣ.
ಟಿ20 ವಿಶ್ವಕಪ್ ನಲ್ಲಿ ವಿರಾಟ್ ಕೊಹ್ಲಿ ಅನೇಕ ಸ್ಮರಣೀಯ ಇನಿಂಗ್ಸ್ ಗಳನ್ನು ಆಡಿದ್ದಾರೆ. ಅದರಲ್ಲಿ ಕಳೆದ ಬಾರಿ ಪಾಕಿಸ್ತಾನ ವಿರುದ್ಧ ಆಡಿದ ಇನಿಂಗ್ಸ್ ಕೂಡಾ ಸೇರಿದೆ. ಪಿಚ್ ಯಾವುದೇ ಇರಲಿ ಸಂದರ್ಭಕ್ಕೆ ತಕ್ಕಂತೆ ರನ್ ಕಲೆ ಹಾಕುವ ಕಲೆಗಾರ ವಿರಾಟ್ ಕೊಹ್ಲಿ.
ವಿರಾಟ್ ಕೊಹ್ಲಿ ಮೊದಲ ಬಾರಿಗೆ ಟಿ20 ವಿಶ್ವಕಪ್ ತಂಡದ ಭಾಗವಾಗಿದ್ದು 2012 ರಲ್ಲಿ. ಇದುವರೆಗೆ ಅವರಿ ಟಿ20 ವಿಶ್ವಕಪ್ ವಿಜೇತ ತಂಡದ ಸದಸ್ಯ ಎನಿಸಿಕೊಳ‍್ಳುವ ಭಾಗ್ಯ ಸಿಕ್ಕಿಲ್ಲ. ಈ ಬಾರಿಯಾದರೂ ಅದು ನೆರವೇರಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ ನಲ್ಲಿ ಇದುವರೆಗೆ ಒಟ್ಟು 25 ಇನಿಂಗ್ಸ್ ಗಳನ್ನು ಆಡಿ 1141 ರನ್ ಗಳಿಸಿದ್ದಾರೆ. ಈ ಮೂಲಕ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಗರಿಷ್ಠ ರನ್ ಕಲೆ ಹಾಕಿದ ದಾಖಲೆ ಅವರ ಹೆಸರಿನಲ್ಲಿದೆ. 81.50 ಸರಾಸರಿಯಲ್ಲಿ ಅವರು ರನ್ ಗಳಿಸಿದ್ದಾರೆ. ಆಧುನಿಕ ಕ್ರಿಕೆಟ್ ನಲ್ಲಿ ಈಗ ಆಡುವ ಕ್ರಿಕೆಟಿಗರ ಪೈಕಿ ಯಾರೂ ಇಷ್ಟು ಸರಾಸರಿಯಲ್ಲಿ ರನ್ ಗಳಿಸಿದ್ದೇ ಇಲ್ಲ. ನಾಯಕನಾಗಿಯೂ ಅವರು ಅಮೋಘ ಸಾಧನೆ ಮಾಡಿದ್ದರು. ಟಿ20 ವಿಶ್ವಕಪ್ ಗಳಲ್ಲಿ ನಾಯಕನಾಗಿ ಕೊಹ್ಲಿ 9 ಪಂದ್ಯ ಮುನ್ನಡೆಸಿದ್ದು 7 ಗೆಲುವು ಕಂಡಿದ್ದಾರೆ. ಈ ಬಾರಿ ಕೊಹ್ಲಿ ಬ್ಯಾಟ್ ಮತ್ತೊಮ್ಮೆ ಝಳಪಿಸಬೇಕು, ಟೀಂ ಇಂಡಿಯಾ ಗೆಲ್ಲಬೇಕು ಎಂಬುದು ಅಭಿಮಾನಿಗಳ ಪ್ರಾರ್ಥನೆ.