ಮುಂಬೈ: ಟೀಂ ಇಂಡಿಯಾದಲ್ಲಿ ಹಿರಿಯ ಕ್ರಿಕೆಟಿಗರ ನಿವೃತ್ತಿ ಯಾವತ್ತೂ ಗೌರವಯುತವಾಗಿರುವುದಿಲ್ಲ ಎಂಬುದಕ್ಕೆ ಮತ್ತೊಂದು ಸೇರ್ಪಡೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ. ಇಬ್ಬರಿಗೂ ವಿದಾಯ ಪಂದ್ಯವನ್ನೂ ನೀಡದೇ ತಂಡದಿಂದಲೇ ಗೇಟ್ ಪಾಸ್ ನೀಡಲಾಯಿತು ಎಂಬ ಸುದ್ದಿಯೊಂದು ಈಗ ಹರಿದಾಡುತ್ತಿದೆ.
ಈ ಹಿಂದೆ ಸೌರವ್ ಗಂಗೂಲಿಯಿಂದ ಹಿಡಿದು ಲೇಟೆಸ್ಟ್ ಆಗಿ ವಿರಾಟ್ ಕೊಹ್ಲಿವರೆಗೆ ಗೌರವಯುತ ವಿದಾಯ ಪಂದ್ಯ ಸಿಗದೇ ನಿವೃತ್ತಿಯಾಗುತ್ತಿದ್ದಾರೆ. ಒಂದೇ ಒಂದು ಸಮಾಧಾನಕರ ಅಂಶವೆಂದರೆ ಕೊಹ್ಲಿ, ರೋಹಿತ್ ಇನ್ನೂ ಏಕದಿನ ಪಂದ್ಯ ಆಡುತ್ತಿದ್ದು ಈ ಮೂಲಕವಾದರೂ ಅವರನ್ನು ಮೈದಾನದಲ್ಲಿ ನೋಡಬಹುದು ಎಂಬ ಸಮಾಧಾನ ಅಭಿಮಾನಿಗಳದ್ದು.
ಈಗಿನ ವರದಿ ಪ್ರಕಾರ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾರನ್ನು ನಿವೃತ್ತಿಯಾಗುವಂತೆ ಸ್ವತಃ ಬಿಸಿಸಿಐ ಒತ್ತಡ ಹೇರಿತ್ತು ಎನ್ನಲಾಗುತ್ತಿದೆ. ಕೆಲವೇ ದಿನಗಳ ಮೊದಲು ಇಬ್ಬರೂ ಆಟಗಾರರು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಆಡುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಮೊದಲು ರೋಹಿತ್ ಶರ್ಮಾರಿಗೆ ನಾಯಕತ್ವ ನೀಡದೇ ಇರಲು ತೀರ್ಮಾನಿಸಿದರು. ಇದರಿಂದಾಗಿ ರೋಹಿತ್ ನಿವೃತ್ತಿಯ ನಿರ್ಧಾರ ಮಾಡಿದರು. ಇದೀಗ ಕೊಹ್ಲಿ ಕತೆಯೂ ಇದೇ ಎನ್ನಲಾಗುತ್ತಿದೆ. ಹೀಗಾಗಿ ಇಬ್ಬರೂ ಆಟಗಾರರನ್ನು ಒತ್ತಾಯಪೂರ್ವಕವಾಗಿ ತಂಡದಿಂದ ಹೊರಹಾಕಲಾಯಿತೇ ಎಂಬ ಅನುಮಾನ ಮೂಡಿದೆ.